ಹಾಸನದಲ್ಲಿ ಅದ್ದೂರಿ ನಾಡಪ್ರಭು ಕೆಂಪೇಗೌಡ ಜಯಂತಿ ಉದ್ಘಾಟನೆ

ಹಾಸನದಲ್ಲಿ ಅದ್ದೂರಿ ನಾಡಪ್ರಭು ಕೆಂಪೇಗೌಡ ಜಯಂತಿ ಉದ್ಘಾಟನೆ
Published on

ಹಾಸನ: ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ತಮ್ಮ ಕಲ್ಪನೆಯಲ್ಲಿ ನಿರ್ಮಿಸಿ, ಅದಕ್ಕೆ ಅಗತ್ಯ ಸೌಕರ್ಯಗಳನ್ನು ಒದಗಿಸಿದ ಅವರ ದೂರದೃಷ್ಠಿಯಿಂದ ದೇಶ ವಿದೇಶಗಳಿಂದ ಹೆಚ್ಚಿನ ಜನರು ಆಗಮಿಸುತ್ತಿದ್ದಾರೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಬಣ್ಣಿಸಿದರು.
ನಗರದ ಹಾಸನಾಂಬ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಸರ್ವ ಜನಾಂಗದ ಅನುಕೂಲಕ್ಕಾಗಿ ಬೆಂಗಳೂರನ್ನು ನಿರ್ಮಿಸಿದರು. ಅವರು ಕಟ್ಟಿದ ನಾಡನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಇಂತಹ ಮಹನೀಯರ ಜಯಂತಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದ್ದು, ಮುಂದಿನ ವರ್ಷ ದೊಡ್ಡಮಟ್ಟದಲ್ಲಿ ಕೆಂಪೇಗೌಡರ ಜಯಂತಿ ಆಚರಣೆ ಮಾಡುವುದರ ಜೊತೆಗೆ ಅವರ ಪ್ರತಿಮೆ ಅನಾವರಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಗುರುರಾಜ್ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಜಯನಗರ ಸಾಮ್ರಾಜ್ಯದ ಸಾಮಂತರಾಗಿ ಯಲಹಂಕದಲ್ಲಿ ಪಾಳೆಗಾರಿಕೆ ನಡೆಸುತ್ತಿದ್ದ ಕೆಂಪೇಗೌಡರು, ತಮ್ಮ ಅಧಿಕಾರವನ್ನು ಜನಪರ ಕೆಲಸಗಳಿಗೆ ಬಳಸಿಕೊಂಡು ಸಾವಿರಾರು ಕೆರೆಗಳು, ನೂರಾರು ಬಾವಿಗಳನ್ನು ತೋಡಿಸುವುದು, ರಸ್ತೆ ಎರಡು ಬದಿಗಳಲ್ಲಿ ಗಿಡಗಳನ್ನು ಬೆಳೆಸುವುದು ಮಾತ್ರವಲ್ಲದೇ ಕೋಟೆ ಕಟ್ಟಿ, ಬೆಂಗಳೂರಿನಂತಹ ಹೊಸದೊಂದು ಊರನ್ನೇ ಸೃಷ್ಟಿ ಮಾಡಿದರು. ಜೊತೆಗೆ ಅಲ್ಲಿಗೆ ಬೇಕಾದ ವಿವಿಧ ಕಸಬುಗಳಿಗೆ ಅನುಗುಣವಾಗಿ ಪೇಟೆಗಳ ಸ್ಥಾಪಿಸಿ, ರಕ್ಷಣೆಗಾಗಿ ಕಾವಲು ಗೋಪುರಗಳ ನಿರ್ಮಾಣ ಮಾಡುವ ಮೂಲಕ ಹೇಗೆ ಜನಾನುರಾಗಿಯಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಇಂದಿನ ರಾಜಕಾರಣಿಗಳು ತಮಗೆ ದೊರೆತ ಅಧಿಕಾರವನ್ನು ಸ್ವರ್ಥಕ್ಕಾಗಿ ಬಳಕೆ ಮಾಡಿಕೊಳ್ಳುವ ಸಂದರ್ಭದಲ್ಲಿ, ನಾಡಪ್ರಭು ಕೆಂಪೇಗೌಡರು ತನಗೆ ಧಕ್ಕಿದ ರಾಜತ್ವದ ಅಧಿಕಾರ ಪ್ರಜೆಗಳಿಗಾಗಿ ಮೀಸಲಿಟ್ಟು ಮಾದರಿಯಾಗಿದ್ದಾರೆ. ಯಾವ ಸಾಮಂತ ಪಾಳೆಗಾರರಿಗೂ ನೀಡದ ಶಾಸನ ಸ್ಥಾಪನೆ, ನಾಣ್ಯಗಳನ್ನು ಟಂಕಿಸುವ ಅಧಿಕಾರವನ್ನು ವಿಜಯನಗರ ಸಾಮ್ರಾಜ್ಯದ ಅರಸರು ಕೆಂಪೇಗೌಡರಿಗೆ ನೀಡಿ, ಅಮರನಾಯಕ ಎಂಬ ಬಿರುದನ್ನೂ ಕೊಟ್ಟಿದ್ದರು. ಇಡೀ ಇತಿಹಾಸನವನ್ನು ಗಮನಿಸಿದರೆ ರಾಜರೇ ಶಾಸನಗಳನ್ನು ಬರೆಸುತ್ತಿದ್ದರು. ಆದರೆ, ಪ್ರಜೆಗಳೇ ಪ್ರಭುವಿನ ಬಗ್ಗೆ ಶಾಸನ ಬರೆಸಿದ್ದರೆ ಕೆಂಪೇಗೌಡರಿಗೆ ಎಂಬದನ್ನು ಗಮನಿಸಿದರೆ ಅವರು ಎಷ್ಟರ ಮಟ್ಟಿಗೆ ಜನಾನುರಾಗಿಯಾಗಿದ್ದರು ಎಂಬುದನ್ನು ತೋರಿಸುತ್ತದೆ. ಆ ಶಾಸಕ ಇಂದಿಗೂ ಲಭ್ಯವಿದ್ದು, ಯಾರು ಬೇಕಾದರೂ ಓದಬಹುದು ಎಂದರು.
ಜನಪದರು ಕಟ್ಟಿರುವ ಕಥೆಯಂತೆ ಕೆಂಪೇಗೌಡರು ಕೋಟೆ ನಿರ್ಮಾಣ ಸಂರ್ಭದಲ್ಲಿ ನಾಲ್ಕು ದಿಕ್ಕಿಗೂ ದ್ವಾರಗಳನ್ನು ಸ್ಥಾಪನೆ ಮಾಡುವಾಗ ದಕ್ಷಿಣದ ಬಾಗಿಲು ಪ್ರತಿಬಾರಿಯೂ ಬಿದ್ದು ಹೋಗುತ್ತಿತ್ತು. ಈ ಸಮಯದಲ್ಲಿ ಕೆಂಪೇಗೌಡರ ಕನಸಿನಲ್ಲಿ ಬಂದಿದ್ದ ದೇವರು ನರಬಲಿ ನೀಡಿದರೆ ಸಮಸ್ಯೆ ಸರಿಹೋಗುತ್ತದೆ ಎಂಬ ವಾಣಿಯನ್ನು ನುಡಿದಿತ್ತು. ಅದನ್ನು ತಿಳಿದ ಹಿರಿಯ ಸೊಸೆ ಲಕ್ಷ್ಮಮ್ಮ ತನ್ನ ಪ್ರಾಣವನ್ನೇ ಅರ್ಪಣೆ ಮಾಡಿಕೊಂಡು ಬಲಿದಾನ ನೀಡಿ ಕೋಟೆಯ ಬಾಗಿಲು ನಿಲ್ಲಲು ಕಾರಣವಾದರು ಎಂದು ಜಾನಪದರು ಹೇಳುತ್ತಾರೆ. ಈ ಘಟನೆ ಸತ್ಯವೋ ಸುಳ್ಳೋ ಎಂದು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಆದರೆ ಈ ಬಗ್ಗೆ ಇಂದಿಗೂ ಕೊರವಂಗಲದಲ್ಲಿರುವ ದೇವಸ್ಥಾನದಲ್ಲಿ ಈ ಬಗ್ಗೆ ಶಾಸನದಲ್ಲಿ ಉಲ್ಲೇಖವಾಗಿದೆ. ಲಕ್ಷ್ಮಮ್ಮ ಅವರ ಸಮಾಧಿಕೂಡ ನೋಡಲು ಸಿಗುತ್ತದೆ. ಆದ್ದರಿಂದ ಇಂತವರನ್ನು ಸದಾ ಸ್ಮರಿಸುವ ಕೆಲಸವಾಗಬೇಕೆಂದು ಹೇಳಿದರು.
ಕೆಂಪೇಗೌಡರು ಉತ್ತಮ ಆಡಳಿತಗಾರ ಮಾತ್ರವದಲ್ಲೇ ಉತ್ತಮ ಯೋಧ ಕೂಡ ಆಗಿದ್ದು, ವಿಜಯನಗರ ಸಾಮ್ರಾಜ್ಯಕ್ಕೆ ಸೈನಿಕರನ್ನು ಸಿದ್ಧಗೊಳಿಸಿ ಕಳುಹಿಸುತ್ತಿದ್ದರು. ಹೀಗಾಗಿ ಬೆಂಗಳೂರಿಗೆ ಮೊದಲು ಬೆಂಗಾವಲೂರು ಎಂದೂ ಕರೆಯಲಾಗುತ್ತಿತ್ತು ಎನ್ನಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ಎಲ್ಲಾ ಮಹಾತ್ಮರು, ಪುಣ್ಯ ಪುರುಷರು ತಮಗಾಗಿ ಏನೂ ಮಾಡಲಿಲ್ಲ. ತಮ್ಮ ಜನ, ಪ್ರಜೆಗಳಿಗಾಗಿ, ಅವರ ಯೋಗಕ್ಷೇಮಕ್ಕಾಗಿ ಒಳಿತನ್ನು ಮಾಡಿದ್ದಾರೆ. ಕೆಂಪೇಗೌಡರು ಕೇವಲ ಒಕ್ಕಲಿಗ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ, ಅವರ ವ್ಯಕ್ತಿತ್ವ, ದೂರದೃಷ್ಟಿ ಯಿಂದ ಬೆಂಗಳೂರಿನಂತ ನಗರ ನಿರ್ಮಾಣವಾಗಿದೆ. ಅವರನ್ನು ಸರ್ವರೂ ನೆನೆಯುವ ಕೆಲಸವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್ ಮೊಹಮದ್ ಸುಜೀತಾ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಎಸ್. ರಘುಗೌಡ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್. ಮುದ್ದೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಚ್.ಪಿ.ತಾರಾನಾಥ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎೆಚ್.ಎಲ್. ಮಲ್ಲೇಶಗೌಡ ಇತತರು ಇದ್ದರು.

ಒಂಬತ್ತು ಸಾಧಕರಿಗೆ ಸನ್ಮಾನ:
ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 9 ಸಾಧಕರನ್ನು ಸನ್ಮಾನಿಸಲಾಯಿತು. ಸಮಾಜ ಸೇವೆಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ, ಶಿಕ್ಷಣ ಕ್ಷೇತ್ರದಲ್ಲಿ ತಮ್ಮಣ್ಣಗೌಡ, ವೈದ್ಯಕೀಯ ಡಾ.ಭಾರತಿ ರಾಜಶೇಖರ್, ಡಾ.ಪುಣ್ಯ, ಸಾಹಿತ್ಯ ಚೌಡಹಳ್ಳಿ ಪುಟ್ಟರಾಜು, ಮಾಧ್ಯಮ ನಾಗರಾಜು, ಪರಗತಿ ಪರ ರೈತ ಭಾಸ್ಕರ್‌ಗೌಡ ಅವರ ಪರವಾಗಿ ತಂದೆ ಹಲಗೇಗೌಡ, ಪೌರಕಾರ್ಮಿಕ ನೀಲಕಂಠ, ಶಿಕ್ಷಕಿ ರಾಧ ಅವರನ್ನು ಸನ್ಮಾನಿಸಲಾಯಿತು.

ಮೆರವಣಿಗೆ:
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಬೆಳ್ಳಿ ಸಾರೋಟ್‌ನಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ವಿವಿಧ ಕಲಾತಂಡದೊಡನೆ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಕಲಾಭವನದಲ್ಲಿ ಕೊನೆಗೊಂಡಿತು. ಮೆರವಣಿಗೆಯಲ್ಲಿ ಕೆಂಪೇಗೌಡ ವೇಷಧಾರಿಗಳು ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net