

ಹಾಸನ: ರಾಜ್ಯ ಸರ್ಕಾರ ಶಿಶುಪಾಲನ ಕೇಂದ್ರ ಮತ್ತು ಶಾಲಾ ಪೂರ್ವ ಶಿಕ್ಷಣ ತರಗತಿ ಆರಂಭಿಸುವುದನ್ನ ವಿರೋಧಿಸಿ ಮತ್ತು 6ನೇ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಫೆಡರೇಶನ್ ವತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆಯಿಂದ ನೂರಾರು ಜನ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರು ಮೆರವಣಿಗೆ ಮೂಲಕ ಎನ್.ಆರ್. ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಸರ್ಕಾರದ ಧೋರಣೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ 6 ವರ್ಷದೊಳಗಿನ ಮಕ್ಕಳನ್ನು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಆರೋಗ್ಯ, ಲಾಲನೆ-ಪಾಲನೆ, ಪೌಷ್ಟಿಕ ಆಹಾರ, ಶಾಲಾಪೂರ್ವ ಶಿಕ್ಷಣ ಇತ್ಯಾದಿ ಸೇವೆಯನ್ನು ನೀಡುತ್ತಾ ಬಂದಿದ್ದೇವೆ. ಆದರೆ ಇತ್ತೀಚಿಗೆ ಸರ್ಕಾರ ಇದಕ್ಕೆ ಪರ್ಯಾಯವಾಗಿ ಶಿಶುಪಾಲನ ಕೇಂದ್ರಗಳು ಮತ್ತು ಶಾಲಾ ಪೂರ್ವ ಶಿಕ್ಷಣ ತರಗತಿಗಳನ್ನು ಆರಂಭಿಸುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.
ಸರ್ಕಾರ 4ರಿಂದ 5ವರ್ಷ ವಯೋಮಾನದ ಮಕ್ಕಳಿಗೆ ಶಾಲಾ ಪೂರ್ವ ತರಗತಿಗಳನ್ನ ಆರಂಭಿಸಲು ಆದೇಶ ನೀಡಿದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಕಟ್ಟಡದ ಕಾಮಗಾರಿ ಆರಂಭಗೊಂಡಿದೆ. ಇದರಿಂದಾಗಿ ಅಂಗನವಾಡಿ ಕೇಂದ್ರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈಗಾಗಲೇ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗಿ ಅದು ದುರ್ಬಲಗೊಳ್ಳುತ್ತಿದೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಅಂಗನವಾಡಿಗಳನ್ನ ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಈ ಆದೇಶವನ್ನು ಮರುಪರಿಶೀಲನೆ ನಡೆಸಬೇಕು ಮತ್ತು ಅಂಗನವಾಡಿ ಕೇಂದ್ರದಲ್ಲೇ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನ ಆರಂಭಿಸಿ, ಕಾರ್ಯಕರ್ತರು ಮತ್ತು ಸಹಾಯಕರಿಗೆ ಸೂಕ್ತ ತರಬೇತಿ ನೀಡಿ. ಅಲ್ಲಿಗೆ ಬರುವಂತಹ ಮಕ್ಕಳಿಗೆ ಸಮವಸ,್ತ್ರ ಪಠ್ಯಪುಸ್ತಕ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಕೈ ನಾಯಕಿ ಪ್ರಿಯಾಂಕಗಾಂಧಿಯವರು ಅಂಗನವಾಡಿ ಸಂಘಟನೆಯ ನಾಯಕರೊಂದಿಗೆ ಚರ್ಚಿಸಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಾರ್ಯಕರ್ತರಿಗೆ 15000 ಸಹಾಯಕಿಯರಿಗೆ 10,000 ಹಾಗೂ ನಿವೃತ್ತಿ ಪಡೆದವರಿಗೆ ಇಡುಗಂಟು ಮೂರು ಲಕ್ಷ ನೀಡುವ ಭರವಸೆ 6ನೇ ಗ್ಯಾರಂಟಿಯನ್ನು ಘೋಷಣೆ ಮಾಡಿದ್ದರು, ಇದನ್ನ ತಕ್ಷಣವೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್‌ನ ಗೌರವಾಧ್ಯಕ್ಷ ನೇತ್ರಾವತಿ, ಜಿಲ್ಲಾಧ್ಯಕ್ಷ ಎಸ್ .ಎನ್. ಜಯಲಕ್ಷ್ಮೀ, ಕಾರ್ಯದರ್ಶಿ ಬಿ.ನಾಗರತ್ನ ಹಾಗೂ ಎಂ.ಸಿ. ಡೋಂಗ್ರೆ ಸೇರಿದಂತೆ ಇತರರು ಇದ್ದರು