

ಹಾಸನ: ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಜಗತ್ತಿನ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ದೇಶ. ಭಾಷೆ, ಬಾಳ್ವೆ, ಉಡುಗೆ ತೊಡುಗೆಯಲ್ಲಿ ಎಷ್ಟೇ ಭಿನ್ನತೆ ಇದ್ದರೂ ಭಾವನಾತ್ಮಕವಾಗಿ ನಾವೆಲ್ಲರೂ ಒಂದಾಗಿ ಸಾಗುತ್ತಿದ್ದೇವೆ. ಮುಂದೆಯೂ ಹೀಗೆ ಐಕ್ಯತೆಯೊಂದಿಗೆ ದೇಶದ ಸಮಗ್ರತೆ ಉಳಿಸುತ್ತಾ ಭಾರತವನ್ನು ವಿಶ್ವದ ಶ್ರೇಷ್ಠ, ಬಲಿಷ್ಠ ರಾಷ್ಟ್ರವನ್ನಾಗಿಸಲು ಶ್ರಮಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಜಿಲ್ಲಾಡಳಿತ ವತಿಯಿಂದ ಶುಕ್ರವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರೃದ ನಂತರ ಹರಿದು ಹಂಚಿಹೋಗಿದ್ದ ಭಾರತವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಂಗಡಿಸಿ ಒಗ್ಗೂಡಿಸಿದ ಕೀರ್ತಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೆ ಸಲ್ಲುತ್ತದೆ. ದೇಶದ ದಮನಿತರ ದನಿಯಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ವಿಶ್ವದ ಬೃಹತ್ ಲಿಖಿತ ಸಂವಿಧಾನವನ್ನು 1950ರ ಜನವರಿ 26 ರಿಂದ ಅಧಿಕೃತವಾಗಿ ಜಾರಿಗೆ ತರಲಾಯಿತು. ಇದರ ಸವಿನೆನಪೇ ಈ ಗಣರಾಜ್ಯೋತ್ಸವ ಎಂದು ತಿಳಿಸಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ 1930ರ ಜನವರಿ 26 ರಂದು ಭಾರತದಲ್ಲಿ ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ ಸ್ಥಾಪನೆಗೆ ಅವಿರತವಾಗಿ ಶ್ರಮಿಸುವ ಪ್ರತಿಜ್ಞೆ ಮಾಡಿತ್ತು. ಸತತ ಸಂಗ್ರಾಮ ಹಾಗೂ ಪ್ರಯತ್ನದ ಫಲವಾಗಿ 1950ರ ಜನವರಿ 26 ರಂದು ಅದು ನನಸಾಯಿತು. ಅಂದು ನಾವು ಅತಿದೊಡ್ಡ ಲಿಖಿತ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ಅಂದಿನಿಂದ ಇಂದಿನವರೆಗೂ ಈ ಸಂವಿಧಾನ ಎಲ್ಲರ ಹಕ್ಕುಗಳ ರಕ್ಷಣೆ ಮಾಡುತ್ತಾ ನಮ್ಮನ್ನು ಐಕ್ಯತೆಯೊಂದಿಗೆ ಮುನ್ನಡೆಸಿದೆ ಎಂದರು.
ಸಂವಿಧಾನದ ಆಶಯಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರಾಜ್ಯದ 31 ಜಿಲ್ಲೆಗಳಲ್ಲಿ ಜ.26ರಿಂದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಆಯೋಜಿಸಿದೆ. ಅದರಂತೆ ಹಾಸನ ಜಿಲ್ಲೆಯಲ್ಲಿಯೂ ಜಾಥಾಕ್ಕೆ ಚಾಲನೆ ನೀಡಲಾಗಿದೆ. ಸಂವಿಧಾನದಲ್ಲಿರುವಂತೆ ಮೂಲಭೂತ ಹಕ್ಕು, ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲ ಉದ್ದೇಶದಿಂದ ಈ ಜಾಥಾ ಏರ್ಪಡಿಸಲಾಗಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಶಾಸಕರು ತಮ್ಮ ಕ್ಷೇತ್ರದಲ್ಲಿ ಜಾಥಾ ರಥವನ್ನು ಬರಮಾಡಿಕೊಂಡು ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಹಕರಿಸಬೇಕಿದೆ. ಜಾಥಾವು ಜ.26 ರಿಂದ ಫೆ.23 ರವರೆಗೆ ಜಿಲ್ಲೆಯ 264 ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ಅರಿವು ಮೂಡಿಸಲಿದೆ ಎಂದು ಮಾಹಿತಿ ನೀಡಿದರು.
ನಮ್ಮ ಸರ್ಕಾರ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ್ದ ಐದು ಆಶ್ವಾಸನೆಗಳನ್ನು ಈಡೇರಿಸಲು ಪ್ರಮುಖ ಆದ್ಯತೆ ನೀಡಿ ಎಲ್ಲಾ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ನಮ್ಮದು ನುಡಿದಂತೆ ನಡೆವ ಸರ್ಕಾರ, ಸಾಮಾಜಿಕ ನ್ಯಾಯ, ಸಮ ಸಮಾಜದ ನಿರ್ಮಾಣ ನಮ್ಮ ಆದ್ಯತೆ ಮತ್ತು ಬದ್ಧತೆ. ಎಲ್ಲರ ನೆರವಿನಿಂದ ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಮತ್ತು ದುಡಿಯುವ ಕೈಗಳನ್ನು ಬಲಪಡಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ 8 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿದೆ. ಅದರಂತೆ ರಾಜ್ಯ ಸರ್ಕಾರದಿಂದ ಎಸ್‌ಡಿಆರ್‌ಎಫ್ ಅಡಿಯಲ್ಲಿ ಮೊದಲ ಕಂತಿನಲ್ಲಿ ಜಿಲ್ಲೆಗೆ 34.36 ಕೋಟಿ ರೂ.ಗಳನ್ನು 1,89,379 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಬೆಳೆ ಪರಿಹಾರ ಜಮೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
35 ಜನರಿಗೆ ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಅಗಾಧ ಸೇವೆ ಸಲ್ಲಿಸಿದ 35 ಜನ ಗಣನೀಯರನ್ನು ಸನ್ಮಾನಿಸಲಾಯಿತು. ಹಾಗೂ ಅತ್ಯುತ್ತಮ ಕಾರ್ಯ ನಿರ್ವಹಿಸಿದ ಆರೋಗ್ಯ ಸಂಸ್ಥೆಗಳಾದ ಎಸ್‌ಎಸ್‌ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ದೊಡ್ಡಕೊಂಚೆ ಕಮ್ಯುನಿಟಿ ಹೆಲ್ತ್ ಸೆಂಟರ್, ಅಡಗೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಚನ್ನರಾಯಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಜನಪ್ರಿಯ ಆಸ್ಪತ್ರೆ ಮುಖ್ಯಸ್ಥರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪತ್ರಿಕಾ ಕ್ಷೇತ್ರದಿಂದ ಮೋಹನ್‌ಗೆ ಸನ್ಮಾನ:
ಪತ್ರಿಕಾ ರಂಗದಲ್ಲಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಿಜಯವಾಣಿಯ ಸಹಾಯಕ ವರದಿಗಾರ ಮೋಹನ್ ಕಣತೂರು ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ:
ಧ್ವಜಾರೋಹಣದ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಗೌರವ ವಂದನೆ ಸ್ವೀಕರಿಸಿದರು. ಬಳಿಕ ಪೊಲೀಸ್ ಇಲಾಖೆ ಸೇರಿದಂತೆ ನಗರದ ವಿವಿಧ ಶಾಲೆಯ ಮಕ್ಕಳ ಆಕರ್ಷಕ ಪಥಸಂಚಲನ ನಡೆಯಿತು. ಆನಂತರ ವಿವಿಧ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಗು ಮಂಗಳಯಾನ-3ರ ಶ್ಲಾಘನೆ ಗೀತೆಗೆ ಆಕರ್ಷಕವಾಗಿ ಸಮೂಹ ನೃತ್ಯ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಜಿಪಂ ಸಿಇಒ ಡಾ.ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಡಿಎಫ್‌ಒ ಸೌರಭ್ ಕುಮಾರ್ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.