ಹಾಸನದಲೂ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ

ಹಾಸನದಲೂ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ
Published on

ಹಾಸನ : ಚುನಾವಣೆಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಚಾಲನೆ ನೀಡಿದರು. ಹಾಸನದಲ್ಲೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಸಾಂಕೇತಿಕವಾಗಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಹಾಗೂ ಚಾಲನೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಚಾಲನೆ ನೀಡಿದರು. ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಬಿ.ಆರ್. ಪೂರ್ಣಿಮಾ, ನಗರಸಭೆ ಅಧ್ಯಕ್ಷ ಆರ್. ಮೋಹನ್, ನಗರಸಭೆ ಆಯುಕ್ತ ಸತೀಶ್ ಕುಮಾರ್, ಡಿವೈಎಸ್‌ಪಿ ಮುರಳೀಧರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸ್ತ್ರೀಯರ ಸ್ವಾವಲಂಬನೆಗೆ ಮಹತ್ವದ ಯೋಜನೆ

ಗೃಹಲಕ್ಷ್ಮೀ ಯೋಜನೆ ರಾಜ್ಯ ಸರ್ಕಾರದ ಒಂದು ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಸ್ತ್ರೀಯರ ಸ್ವಾವಲಂಬನೆಗೆ ಒಂದು ದಿಟ್ಟ ಹೆಜ್ಜೆಯಾಗಿದೆ. ಜು.19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ವಿಧಾನಸೌಧದಲ್ಲಿ ಚಾಲನೆ ನೀಡಿದ್ದಾರೆ. ಇಂದು ಅನುಷ್ಠಾನಕ್ಕೆ ತರಲಾಗಿದೆ. ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆಯು ಈ ಯೋಜನೆಯ ಫಲಾನುಭವಿಯಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಈಗಾಗಲೇ ಆಧಾರ್ ಕಾರ್ಡ್- ಪಾನ್ ಕಾರ್ಡ್ ಜೋಡಣೆ ಆಗಿರುವ ಮಹಿಳೆಯರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಪ್ರತಿತಿಂಗಳು 2 ಸಾವಿರ ರೂಪಾಯಿ ಜಮೆ ಮಾಡಲಾಗುತ್ತದೆ. ಹಾಸನ ಜಿಲ್ಲೆಯ 154 ಗ್ರಾಮ ಒನ್ ಕೇಂದ್ರಗಳು, 264 ಬಾಪೂಜಿ ಸೇವಾ ಕೇಂದ್ರಗಳು, 27 ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ವ್ಯಾಪ್ತಿಯ ಕೇಂದ್ರಗಳು, 3 ಕರ್ನಾಟಕ ಒನ್ ಕೇಂದ್ರಗಳಲ್ಲಿ ನೋಂದಣಿ ಕಾರ್ಯ ನಡೆಯುತ್ತಿದೆ. ಈ ಯೋಜನೆಗೆ ನೋಂದಣಿ ಮಾಡಲು ಅಂತಿಮ ದಿನಾಂಕ ನಿಗದಿಪಡಿಸಿಲ್ಲ. ಇದುವರೆಗೂ ಹಾಸನ ಜಿಲ್ಲೆಯಲ್ಲಿ 4,13,904 ಯಜಮಾನಿ ಮಹಿಳೆಯರು ಗೃಹ ಲಕ್ಷ್ಮೀ ಯೋಜನೆ ಅಡಿ ನೋಂದಣಿ ಆಗಿದ್ದು, ಶೇ.88.13ರಷ್ಟು ನೋಂದಣಿ ಕಾರ್ಯ ಆಗಿದೆ ಎಂದು ಮಾಹಿತಿ ನೀಡಿದೆ.

ಯೋಜನೆ ಅಡಿ ಮೊದಲ ಕಂತಿನಲ್ಲಿ ಹಾಸನ ಜಿಲ್ಲೆಯ ಒಟ್ಟು 1,80,723 ಯಜಮಾನಿ ಮಹಿಳೆಯರ ಬ್ಯಾಂಕ್ ಖಾತೆಗೆ ಆಗಸ್ಟ್ ತಿಂಗಳ 2 ಸಾವಿರ ಹಣವನ್ನು ನೇರವಾಗಿ ಒಟ್ಟು 36,14,46,00 ರೂಪಾಯಿ ಜಮೆ ಮಾಡಲಾಗಿದೆ. ಎರಡನೇ ಕಂತಿನಲ್ಲಿ ಉಳಿದ ಯಜಮಾನಿ ಮಹಿಳೆಯರ ಹಣವನ್ನು ಜಮೆ ಮಾಡಲಾಗುವುದು ಎಂದು ತಿಳಿಸಿದೆ.

ಗೃಹ ಲಕ್ಷ್ಮೀ ಯೋಜನೆಯೂ ಮಹಿಳೆಯರ ಸಮಲೀಕರಣಕ್ಕೆ ಮಹತ್ವದ ಯೋಜನೆಯಾಗಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಲಾಗಿದೆ. ಮಹಿಳೆಯರ ಜೀವನ ಮಟ್ಟ ಸುಧಾರಿಸುವ ಸಲುವಾಗಿ ಆರ್ಥಿಕ ಸಹಾಯ ಒದಗಿಸುವ ಉದ್ದೇಶವನ್ನು ಈ ಗೃಹ ಲಕ್ಷ್ಮೀ ಯೋಜನೆ ಹೊಂದಿದೆ. ಮಹಿಳೆಯರ ಆರ್ಥಿಕ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಮತ್ತು ಕರ್ನಾಟಕದ ಒಟ್ಟಾರೆ ಅಭಿವೃದ್ಧಿಗೆ ಮಹಿಳೆಯರು ಕೊಡುಗೆ ನೀಡಬೇಕು ಎಂಬುದು ಈ ಯೋಜನೆಯ ಗುರಿ ಆಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮೈಸೂರು ಕಾರ್ಯಕ್ರಮ ನೇರಪ್ರಸಾರ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಯೋಜನೆಗೆ ಚಾಲನೆ ನೀಡುವ ಕಾರ್ಯವನ್ನು ದೊಡ್ಡ ಡಿಜಿಟಲ್ ಪರದೆಯ ಮೇಲೆ ನೇರಪ್ರಸಾರ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟನೆಯಿಂದ ಸಮಾರೋಪದವರೆಗೂ ಕಾರ್ಯಕ್ರಮವನು ಸಾವಿರಾರು ಮಹಿಳೆಯರು ನೇರಪ್ರಸಾರದಲ್ಲಿ ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net