

ಹಾಸನ: ಮಾರಕ ಕರೊನಾ ಸೋಂಕಿನ ಭೀತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಶಿಕ್ಷಕರು ಹಾಗೂ ಪಾಲಕರು ಮುತುವರ್ಜಿಯಿಂದ ಮಕ್ಕಳಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಕಿವಿಮಾತು ಹೇಳಿದರು.
ನಗರದ ಸಂತ ಜೋಸೆಫ್ ಶಾಲೆ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತೆ ಹಾಗೂ ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಾಸನ ಕಳೆದ ಬಾರಿ ಪ್ರಥಮ ಸ್ಥಾನ ಪಡೆದಿದ್ದು, ಅದನ್ನು ಉಳಿಸಿಕೊಳ್ಳಬೇಕು. ಜಿಲ್ಲೆಯ ವಿದ್ಯಾರ್ಥಿಗಳು ಬುದ್ಧಿವಂತರಿದ್ದು, ಮೂರು ತಿಂಗಳ ರಜೆಯಲ್ಲಿ ವಿದ್ಯಾಭ್ಯಾಸದಲ್ಲಿ ನಿರತರಾಗಿದ್ದಾರೆಂಬ ವಿಶ್ವಾಸವಿದೆ. ಈ ಸವಾಲನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಆನ್‌ಲೈನ್, ಜೂಮ್ ಆ್ಯಪ್, ವಾಟ್ಸ್‌ಆ್ಯಪ್ ಮೂಲಕ ತರಗತಿ ನಡೆಸುವ ಮೂಲಕ ಎಲ್ಲ ಶಿಕ್ಷಕರು ಮಕ್ಕಳನ್ನು ಸಜ್ಜುಗೊಳಿಸಿದ್ದಾರೆ ಎಂದು ಹೇಳಿದರು.
1 ಲಕ್ಷ ರೂ. ಬಹುಮಾನ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಫಲಿತಾಂಶ ಗಳಿಸುವ ಜಿಲ್ಲೆಯ ಶಾಲೆಗೆ 1 ಲಕ್ಷ ರೂ. ವೈಯಕ್ತಿಕ ಬಹುಮಾನ ನೀಡುತ್ತೇನೆ ಎಂದು ಸಚಿವ ಕೆ.ಗೋಪಾಲಯ್ಯ ಘೋಷಿಸಿದರು.
ಜಿಲ್ಲಾ ಉಸ್ತುವಾರಿ ಸಚಿವನಾಗಿ ಕಳೆದ ವರ್ಷ ಸಾಧಿಸಿರುವ ಫಲಿತಾಂಶವನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ. ಇದನ್ನು ಅರಿತು ಎಲ್ಲರೂ ಕರ್ತವ್ಯ ನಿರ್ವಹಿಸಬೇಕು. ವಿದ್ಯಾರ್ಥಿ, ಪಾಲಕರು ಹಾಗೂ ಶಿಕ್ಷಕರ ನೆರವಿನಿಂದ ಗುರಿ ಸಾಧಿಸಬಹುದು ಎಂದು ಹೇಳಿದರು.
ಶಿಕ್ಷಣ ಸಚಿವರ ಹಾಡಿ ಹೊಗಳಿದ ಸಿಂಧ್ಯಾ: ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪರೀಕ್ಷೆ ಬರೆಯುತ್ತಿಲ್ಲ ಎಂಬುದನ್ನು ಬಿಟ್ಟರೆ ವಿದ್ಯಾರ್ಥಿಯಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಖಾತೆಯನ್ನು ಅವರಿಗೆ ನೀಡಿರುವುದು ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಬೇಕಿರುವ ಗೌರವ. ಕರೊನಾ ಸಂದರ್ಭದಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿ ಶಹಬ್ಬಾಷ್ ಎನ್ನಿಸಿಕೊಳ್ಳಲು ಸುರೇಶ್‌ಕುಮಾರ್ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಅವರ ಬಳಿ ಪ್ರಶ್ನೆಪತ್ರಿಕೆ ಇಲ್ಲ ಎನ್ನುವುದು ಬಿಟ್ಟರೆ ಬೇರೆಲ್ಲವೂ ಇದೆ. ಆದ್ದರಿಂದ ಸರ್ಕಾರದ ಪ್ರಯತ್ನಕ್ಕೆ ಎಲ್ಲ ಶಿಕ್ಷಕರು ಬೆನ್ನೆಲುಬಾಗಿ ನಿಲ್ಲಬೇಕು ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗಾಗಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಒಂದು ಕೋಟಿ ಮಾಸ್ಕ್ ಸಿದ್ಧಪಡಿಸಿದೆ. 20 ಸಾವಿರ ಶಿಬಿರಾರ್ಥಿಗಳು ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸಮಾಜ ಸೇವೆಗೆ ನಿಂತಿದ್ದಾರೆ. ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಹಾಗೂ ಹಾಸನಾಂಬ ಜಾತ್ರೆಯಲ್ಲಿ ನಮ್ಮ ಶಿಬಿರಾರ್ಥಿಗಳು ಮಾಡುವ ಕೆಲಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಈ ವರ್ಷ 21257 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು 89 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಪ್ರತಿ ಕೊಠಡಿಯಲ್ಲಿ 18 ವಿದ್ಯಾರ್ಥಿಗಳು ಕೂರಲು ವ್ಯವಸ್ಥೆ ಮಾಡಿದ್ದು ಜ್ವರ, ಕೆಮ್ಮು ಹಾಗೂ ಇತರ ಕಾಯಿಲೆಯಿಂದ ಬಳಲುವ ಮಕ್ಕಳಿಗಾಗಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಮಾಸ್ಕ್, 200 ವಿದ್ಯಾರ್ಥಿಗೆ ಥರ್ಮಲ್ ಸ್ಕ್ರೀನಿಂಗ್ ಸಾಧನ, ಸ್ಯಾನಿಟೈಸರ್ ವಿತರಿಸಲಾಗುವುದು. ಪ್ರತಿ ಕೇಂದ್ರದಲ್ಲಿ ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಮಕ್ಕಳನ್ನು ಕರೆತರಲು ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಮಾಸ್ಕ್ ತಯಾರಿಸಿದ ಸತೀಶ್ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಚಿವ ಗೋಪಾಲಸ್ವಾಮಿ 9 ಸಾವಿರ ಮಾಸ್ಕ್ ವಿತರಿಸಿದರು.
ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್, ಎಸ್ಪಿ ಆರ್.ಶ್ರೀನಿವಾಸ್‌ಗೌಡ, ಉಪವಿಭಾಗಾಧಿಕಾರಿಗಳಾದ ಡಾ. ನವೀನ್ ಭಟ್, ಗಿರೀಶ್ ನಂದನ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಆಯುಕ್ತ ವೈ.ಎಸ್.ವೀರಭದ್ರಪ್ಪ, ಡಿಡಿಪಿಐ ಕೆ.ಎಸ್.ಪ್ರಕಾಶ್ ಇತರರಿದ್ದರು.