ಹಾಸನಂಬ ಜಾತ್ರಾ ಮಹೋತ್ಸವಕ್ಕೆ:ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್

ಹಾಸನಂಬ ಜಾತ್ರಾ ಮಹೋತ್ಸವಕ್ಕೆ:ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್
Published on

ಹಾಸನ: ನ.2ರಿಂದ ಆರಂಭವಾಗಲಿರುವ ಹಾಸನಂಬ ಜಾತ್ರಾ ಮಹೋತ್ಸವದಲ್ಲಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಮೂವರು ಎಎಸ್‌ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಹೇಳಿದರು.

ನಗರದ ಎಸ್‌ಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಶನದ 14 ದಿನಗಳ ಕಾಲ ದಿನದ 24 ಗಂಟೆಯೂ ದರ್ಶನ ಇರುವುದರಿಂದ ಮೂರು ಪಾಳಿಯಲ್ಲಿ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಯಾವುದೇ ರೀತಿ ಲೋಪವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹಾಸನಂಬ ಜಾತ್ರಾ ಮಹೋತ್ಸವಕ್ಕೆ ಮೂವರು ಎಎಸ್‌ಪಿ, 9 ಜನ ಡಿವೈಎಸ್ಪಿ, 26 ಸಿಪಿಐ, 100 ಪಿಎಸ್‌ಐ ಮತ್ತು ಎಎಸ್‌ಐ, 1000 ಸಿಬ್ಬಂದಿಯನ್ನು ನೇಮಿಸಲಾಗಿದೆ. ಮೈಸೂರು ವಿಭಾಗದ ಹಲವು ಜಿಲ್ಲೆಗಳಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಈ ಬಂದೋಬಸ್ತ್ ನಿಯೋಜಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ವಿಶೇಷವಾಗಿ ಕೆಎಸ್‌ಆರ್‌ಪಿ, ಡಿಆರ್ ಸೇರಿದಂತೆ ಇನ್ನಿತರ ಮೀಸಲು ಪಡೆಗಳನ್ನು ಕೂಡ ಭದ್ರತೆಗೆ ಬಳಸಿಕೊಳ್ಳಲಾಗುವುದು. ಕಳೆದ ಬಾರಿ ಹಾಸನಾಂಬ ದರ್ಶನಕ್ಕೆ ಆರು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಆದರೆ ಈ ಬಾರಿ 10 ಲಕ್ಷ ಜನರು ಬರುವ ನಿರೀಕ್ಷೆ ಇದೆ. ವಿಶೇಷವಾಗಿ ಹೆಚ್ಚಾಗಿ ಹೆಣ್ಣು ಮಕ್ಕಳು ಆಗಮಿಸುವ ಸಾಧ್ಯತೆ ಇರುವುದರಿಂದ ಸಿಬ್ಬಂದಿಯಲ್ಲಿ ಶೇಕಡ 50ಕ್ಕಿಂತ ಹೆಚ್ಚು ಜನ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಕಳೆದ ಬಾರಿಗಿಂತ ಈ ಬಾರಿ ಟ್ರಾಫಿಕ್ ಸಮಸ್ಯೆಯನ್ನು ಸುಧಾರಿಸುವ ನಿಟ್ಟಿನಲ್ಲಿ 50 ಪಾಯಿಂಟ್‌ಗಳನ್ನು ಗುರುತು ಮಾಡಲಾಗಿದೆ. ಅಲ್ಲದೆ ಹೆಚ್ಚಿನ ಸಿಬ್ಬಂದಿಯನ್ನು ಕೂಡ ನಿಯೋಜಿಸಿಕೊಳ್ಳಲಾಗಿದೆ. ಹಾಸನಾಂಬ ಭದ್ರತೆ ದೃಷ್ಟಿಯಿಂದ ಸಿಬ್ಬಂದಿಗೆ ಮಂಗಳವಾರ ಮತಯ್ತು ಬುಧವಾರ ಮಾಹಿತಿಯನ್ನು ನೀಡಲಾಗುವುದು ಎಂದರು.

ಈ ಬಾರಿ ಗಣ್ಯರನ್ನು ಕರೆದುಕೊಂಡು ಬರುವ ದೃಷ್ಟಿಯಿಂದ ಪ್ರವಾಸಿ ಮಂದಿರದಿಂದ ಜಿಲ್ಲಾಡಳಿತದ ವತಿಯಿಂದ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ನಗರಸಭೆ ಆವರಣ, ಹೊಸ ಲೈನ್ ರಸ್ತೆ ಹಾಗೂ ಗೊರೂರು ರಸ್ತೆಯಲ್ಲಿ ಪಾಕಿರ್ಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net