

ಮೈಸೂರು: ಹಾಸದನಲ್ಲಿ ಡಿ.5ರಂದು ಆಯೋಜಿಸಿವ ಕಾಂಗ್ರೆಸ್ ಸಮಾವೇಶವು ಪಕ್ಷ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕಾರ್ಯಕ್ರಮವೇ ಹೊರತು, ಯಾರ ವಿರುದ್ಧವೂ ತೊಡೆ ತಟ್ಟುವುದಕ್ಕಾಗಿ ಅಲ್ಲ ಎಂದು ಪಶುಸಂಗೋಪನಾ, ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಮತ್ತು ಹಾಸನದ ಸಮಾವೇಶದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸಮಾವೇಶವು ಹಾಸನ ಭಾಗದಲ್ಲಿ ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬುವುದಕ್ಕಾಗಿ ಜತೆಗೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಸಮಾವೇಶ ಮಾಡುತ್ತಿದ್ದೇವೆಯೇ ಹೊರತು ಯಾರ ವಿರುದ್ಧವೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸಮಾವೇಶದ ಬಗ್ಗೆ ಅನಾಮಧೇಯ ಪತ್ರ ಯಾರು ಬೇಕಾದರೂ ಬರೆಯಬಹುದು. ಬಿಜೆಪಿಯವರು ಏಕೆ ಬರೆದಿರಬಾರದು? ಈಗ ಅವರು ಬಹಿರಂಗವಾಗಿ ಬಡಿದಾಡುತ್ತಿದ್ದು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಬಿಜೆಪಿಗೆ ಭಯ ಉಂಟು ಮಾಡಿದೆ ಎಂದು ಹೇಳಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ 1.05 ಲಕ್ಷ ಒಕ್ಕಲಿಗರ ಮತವಿದ್ದರೂ ಎಚ್.ಡಿ.ಕುಮಾರಸ್ವಾಮಿ ಮಗ ಏಕೆ ಸೋತರು. ಜನರು ಈಗ ಕಾಂಗ್ರೆಸ್ ಪರವಾಗಿದ್ದಾರೆ ಎಂಬುದು ಸಾಬೀತಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಕೊಟ್ಟಿದ್ದಾರೆ.
ಇಬ್ಬರೂ ಒಂದಾಗಿ ಚುನಾವಣೆ ಎದುರಿಸಿದರೂ ಮೂರು ಕ್ಷೇತ್ರ ಸೋತಿದ್ದಾರೆ. ಕಾಂಗ್ರೆಸ್ ಉಳಿಸಿಕೊಳ್ಳಬೇಕೆಂದು ಜನ ಬಯಸಿದ್ದಾರೆ. ಅದನ್ನು ಸಹಿಸಿಕೊಳ್ಳಲಾಗದೆ ಸಣ್ಣ ವಿಚಾರ ಹಿಡಿದು ದೊಡ್ಡದು ಮಾಡಲಾರಂಭಿಸಿದ್ದಾರೆ. ಇದೆಲ್ಲವನ್ನೂ ಮುಖಂಡರು, ಕಾರ್ಯಕರ್ತರು ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಪಕ್ಷದ ಸಂಘಟನೆ ಆಗಲಿ ಎಂಬುದು ಕಾಂಗ್ರೆಸ್ ಸಮಾವೇಶದ ಉದ್ದೇಶವಾಗಿದೆ. ಮೈಸೂರಿನಿಂದ 1,300 ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಮೈಸೂರು ಜಿಲ್ಲೆ ಜವಾಬ್ದಾರಿ ಸಿಎಂ ಅವರೇ ತೆಗೆದುಕೊಂಡಿದ್ದಾರೆ. ಪ್ರತಿ ತಾಲೂಕಿನ ವಿಚಾರ ಅವರಿಗೆ ತಿಳಿದಿದೆ. ಇಲ್ಲಿ ಅವಕಾಶ ಸಿಗಲಿಲ್ಲ ಎಂದು ಹೊರಗಡೆ ಹೋದರೆ ಏನೂ ಪ್ರಯೋಜನ ಆಗಲ್ಲ. ಶೀಘ್ರದಲ್ಲೇ ಉಳಿದ ಅಧಿಕಾರ ಹಂಚಿಕೆಯಾಗಿ ಕಾರ್ಯಕರ್ತರಿಗೆ ಅವಕಾಶ ಆಗಲಿದೆ. ಜಿಲ್ಲೆಗೆ ಹೆಚ್ಚಿನ ಅವಕಾಶ ಮಾಡಿಕೊಡಿ ಎಂದಿದ್ದೇವೆ. ಅಧಿವೇಶನದ ವೇಳೆಗೆ ಪಟ್ಟಿ ಹೊರಬರಲಿದೆ ಎಂದು ತಿಳಿಸಿದರು.
ನಮ್ಮ ಪರವಾಗಿ ಇರುವ ಮಾಧ್ಯಮಗಳಿಗಿಂತ ಹೆಚ್ಚು ವಿರೋಧವಾಗಿರುವ ಮಾಧ್ಯಮಗಳೇ ಹೆಚ್ಚು. ದೃಶ್ಯ ಮಾಧ್ಯಮದಲ್ಲಿ ಬರುವುದನ್ನೇ ನಂಬಬೇಡಿ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಮುಂಬರುವ ಫೆಬ್ರವರಿ ಹೊತ್ತಿಗೆ ಜಿಪಂ, ತಾಪಂ, ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದ್ದು, ಅದಕ್ಕೆ ಕಾರ್ಯಕರ್ತರ ಗಟ್ಟಿಗೊಳಿಸಲು ಹಾಸನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಸಂವಿಧಾನದ ಆಶಯ ಉಳಿಯಬೇಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವ ಉಳಿಯಬೇಕಿದೆ. ಅವರ ನಾಯಕತ್ವ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಆಗಲೇ ಸರ್ಕಾರ ಮತ್ತಷ್ಟು ಜನಪರವಾಗಿ ನಡೆಯಲು ಅನುಕೂಲವಾಗಲಿದೆ. ಇದರೊಮಂದಿಗೆ ಕೋಮುವಾದಿ ಶಕ್ತಿಗಳಿಗೂ ಉತ್ತರ ಕೊಡಬೇಕಾಗಿದೆ ಎಂದು ತಿಳಿಸಿದರು.
ಗಾಂಧಿ, ಇಂದಿರಾ ಗಾಂಧಿಯಿಂದ ಈಗಿನ ರಾಹುಲ್ ಗಾಂಧಿಯವರಿಗೆ ದನಿಯಿಲ್ಲದವರಿಗೆ ದನಿ ನೀಡುವುದು ಮತ್ತು ಸಂವಿಧಾನದ ಆಶಯ ರಕ್ಷಿಸುವುದೇ ನಮ್ಮ ಮೊದಲ ಆದ್ಯತೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಗಂಭೀರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಮನವಿ ಸಲ್ಲಿಸಬೇಕು ಎಂದರು.
ಮಾಜಿ ಸಚಿವ ಉಗ್ರಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಇತರರು ಇದ್ದರು.