

ಹಾಸನ: ಲೋಕಸಭಾ ಹಾಸನ ಕ್ಷೇತ್ರದ ಬಿಜೆಪಿ ಹಾಗು ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆ ಬಗ್ಗೆ ಸಮೀಕ್ಷೆಗಳು ನಡೆಯುತ್ತಿದ್ದು ನಾನೂ ಆಕಾಂಕ್ಷಿತರ ಪಟ್ಟಿಯಲ್ಲಿದ್ದೇನೆ ಎಂದು ಬಿಜೆಪಿ ಯುವ ಮುಖಂಡ ಹಾಗೂ ಕೆಸಿಪಿ ಗ್ರೂಪ್‌ನ ಸಿಇಒ ಎಚ್.ಪಿ.ಕಿರಣ್‌ಗೌಡ ತಿಳಿಸಿದರು.
ಜನರ ಒಲವು, ನಿಲುವು ಯಾರ ಪರ ಇದೆ. ಯಾರು ಗೆಲ್ಲುವ ಸಾಧ್ಯತೆ ಇದೆ ಎಂಬುದರ ಬಗ್ಗೆ ಸರ್ವೆ ನಡೆಯುತ್ತಿದೆ. ಅದು ಮುಗಿದ ನಂತರ ಟಿಕೆಟ್ ಯಾರಿಗೆ ಎಂಬುದು ಅಂತಿಮ ಆಗಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆಯಾದರೂ, ಇಂಥವರೇ ಅಭ್ಯರ್ಥಿ ಎಂಬುದು ಈವರೆಗೂ ಫೈನಲ್ ಆಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.
ನಾನು ಎಲ್ಲಾ ತಾಲೂಕು, ಹೋಬಳಿ ಸೇರಿದಂತೆ ಜಿಲ್ಲಾದ್ಯಂತ ಸುತ್ತಾಡಿದ್ದೇನೆ. ಮುಖಂಡರು, ಕಾರ್ಯಕರ್ತರೊಂದಿಗೆ ಮಾತನಾಡಿದ್ದೇನೆ. ಎಲ್ಲೆಡೆ ನನ್ನ ಪರವಾದ ಒಲವಿದ್ದು, ನನಗೊಂದು ಅವಕಾಶ ನೀಡಿದರೆ ಗೆಲ್ಲುವ ವಿಶ್ವಾಸ ಇದೆ ಎಂಬುದು ಅನೇಕರ ಭಾವನೆಯಾಗಿದೆ ಎಂದರು.
ಯಾರು ಜನರ ಮಧ್ಯೆ ಇದ್ದಾರೆ, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ, ಎಲ್ಲಕ್ಕಿಂತ ಮುಖ್ಯವಾಗಿ ಗೆಲುವಿನ ಶಕ್ತಿ ಯಾರಿಗಿದೆ ಎಂಬುದನ್ನು ಗುರುತಿಸಿ ನಮ್ಮ ಪಕ್ಷ ಅವಕಾಶ ನೀಡಲಿದೆ. ನಮ್ಮ ಉದ್ದೇಶ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು ಎಂಬುದಾಗಿದೆ ಎಂದರು.
ಪಕ್ಷ ಹೇಳಿದಂತೆ ಕೆಲಸ: ಒಂದು ವೇಳೆ ಹಾಸನ ಕ್ಷೇತ್ರ ಜೆಡಿಎಸ್‌ಗೆ ದೊರೆತು ಪ್ರಜ್ವಲ್ ಸೇರಿ ಯಾರೇ ಅಭ್ಯರ್ಥಿಯಾದರೂ, ನಮ್ಮ ಪಕ್ಷ ಏನು ಸೂಚನೆ ಕೊಡುತ್ತದೆಯೋ ಅದನ್ನು ಕಾರ್ಯಕರ್ತನಾಗಿ ನಿರ್ವಹಿಸುವೆ ಎಂದು ಪ್ರಶ್ನೆಗೆ ಉತ್ತರಿಸಿದರು. ಹಾಲಿ ಸಂಸದರ ಕಾರ್ಯವೈಖರಿ ಬಗ್ಗೆ ಕೇಳಿದ ಪ್ರಶ್ನೆಗೆ ತಾತ ದೇವೇಗೌಡರು ಮಾಡಿರುವಷ್ಟು ಕೆಲಸ ಮಾಡಿಲ್ಲ ಎಂದು ಉತ್ತರಿಸಿದರು.
ನನ್ನದೇ ಕನಸಿದೆ: ನಾನು ನಾಲ್ಕೈದು ವರ್ಷಗಳಿಂದ ಬಿಜೆಯಲ್ಲಿದ್ದೇನೆ. ರಾಜಕೀಯಕ್ಕೆ ಬರುವ ಮೊದಲು ಶಿಕ್ಷಣ, ಬಡಮಕ್ಕಳಿಗೆ ನೆರವು, ಅನಾಥಾಶ್ರಮಗಳಿಗೆ ದೇಣಿಗೆ ಸೇರಿದಂತೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಈಗಲೂ ಅದನ್ನು ಮುಂದುವರಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಹೊಸದಾಗಿ ಏನಾದರೂ ಮಾಡಬೇಕು ಎಂಬ ಹಸಿವಿದೆ. ಇದಕ್ಕೆ ಎಲ್ಲರ ಮಾರ್ಗದರ್ಶನ, ಪ್ರೀತಿ, ಸಹಕಾರ, ಬೆಂಬಲ ಇರಲಿ ಎಂದು ಮನವಿ ಮಾಡಿದರು.
ನಾನು ನೂರರಷ್ಟು ಜನಸಂಪರ್ಕ ಮಾಡಿಲ್ಲ, ಮುಂದೆ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುವೆ. ಆ ಇಚ್ಛಾಶಕ್ತಿ ಇದೆ ಎಂದ ಅವರು, ಜಿಲ್ಲೆಗೆ ಕ್ರೀಡಾಸೌಲಭ್ಯ ಒದಗಿಸಲು ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧನಿದ್ದೇನೆ. ನನ್ನ ರಾಜಕೀಯ ಮಾರ್ಗದರ್ಶಕರು ಹಾಗೂ ರಾಜಕೀಯ ಗುರು ಮಾಜಿ ಶಾಸಕ ಪ್ರೀತಂ ಜೆ. ಗೌಡ ಅವರ ಕಾರ್ಯಶೈಲಿ, ಯಾವುದೇ ಅಭಿವೃದ್ಧಿ ಕೆಲಸ ಮಾಡುವ ರೀತಿ ನನಗಿಷ್ಟ. ಅದೇ ಕಾರಣಕ್ಕೆ ಮತ್ತು ಬಿಜೆಪಿ ಐಡಿಯಾಲಜಿ ಒಪ್ಪಿ ಬಿಜೆಪಿ ಸೇರಿ ಕೆಲಸ ಮಾಡುತ್ತಿದ್ದೇನೆ ಎಂದು ಕಿರಣ್ ತಿಳಿಸಿದರು.