

ಹಾಸನ : ಗದ್ದಲದ ನಡುವೆಯೇ ನಗರಸಭೆ ಅಧ್ಯಕ್ಷ ಆರ್.ಮೋಹನ್ ಕುಮಾರ್ ಅವರು ಬಜೆಟ್ ಮಂಡಿಸಲು ಮುಂದಾದರು. ಆದರೆ, ಗದ್ದಲ ಹೆಚ್ಚಾದ ಕಾರಣ ಕೇವಲ ಒಂದು ನಿಮಿಷದಲ್ಲಿ ಬಜೆಟ್ ಮಂಡಿಸಿ ಮುಗಿಸಿದರು. 2023-24ನೇ ಸಾಲಿನ 165.28 ಕೋಟಿ ಗಾತ್ರದ ಬಜೆಟ್‌ನಲ್ಲಿ 3.12 ಕೋಟಿ ಉಳಿತಾಯ ಆಯವ್ಯಯವನ್ನು ಮಂಡಿಸಿದರು.
ನಗರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರ ಸಲಹೆ ಸೂಚನೆ ಮೇರೆಗೆ ಈ ಬಾರಿ 3.12 ಕೋಟಿ ಉಳಿತಾಯ ಬಜೆಟ್ ಮಂಡಿಸಲಾಗುತ್ತಿದೆ. ನಗರದ ವಿವಿಧ ಮೂಲಗಳಿಂದ ಬರುವಂತಹ ಆದಾಯ ಕ್ರೂಡೀಕರಿಸಿ ಒಟ್ಟು 165.28 ಕೋಟಿ ಗಾತ್ರದ ಬಜೆಟ್ ಇದಾಗಿದ್ದು , ಇದರಲ್ಲಿ 2023-24 ನೇ ಸಾಲಿನ ರಾಜಸ್ವ ಖಾತೆಯಲ್ಲಿ 134.25 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಮತ್ತು 162.16 ಕೋಟಿ ಪಾವತಿ ಅಂದಾಜಿಸಲಾಗಿದೆ ಎಂದು ಹೇಳಿದರು.
ನಗರಸಭೆಗೆ ಆಸ್ತಿ ತೆರಿಗೆಯಿಂದ 16 ಕೋಟಿ, ಕಟ್ಟಡದ ಪರವಾನಿಗಿ 2.50 ಕೋಟಿ ರೂ., ವಾಣಿಜ್ಯ ಮಳಿಗೆ ಬಾಡಿಗೆ 1.20 ಕೋಟಿ ರೂ., ಅಭಿವೃದ್ಧಿ ಶುಲ್ಕ 2 ಕೋಟಿ ರೂ., ಉದ್ಯಮಿ ಪರವಾನಿಗಿ 1.50 ಕೋಟಿ ರೂ., ಸಂತೆ, ಜಾತ್ರೆ, ವಾಹನ ನಿಲುಗಡೆ ಹಾಗೂ ಇತರೆ ಮೂಲಗಳಿಂದ ನೆಲ ಬಾಡಿಗೆ 60 ಲಕ್ಷ ರೂ., ನೀರು ಸರಬರಾಜು ಶುಲ್ಕ 5 ಕೋಟಿ ರೂ. ಮತ್ತು ಸರ್ಕಾರದಿಂದ ಎಸ್‌ಎಫ್‌ಸಿ ಅನುದಾನ 14.52 ಕೋಟಿ ರೂ., ಎಸ್‌ಎಫ್‌ಸಿ ವಿದ್ಯುತ್ ಅನುದಾನ 13 ಕೋಟಿ ರೂ., ಮುಕ್ತ ನಿಧಿ ಅನುದಾನ 5 ಕೋಟಿ ರೂ. ನಿರೀಕ್ಷಿಸಲಾಗಿದೆ ಎಂದರು.
ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಅದರಲ್ಲಿ ರಸ್ತೆ ಮತ್ತು ಪಾದಚಾರಿ ರಸ್ತೆ ಕಾಮಗಾರಿಗೆ 5 ಕೋಟಿ ರೂ., ನೀರು ಸರಬರಾಜು ಕಾಮಗಾರಿಗೆ 3 ಕೋಟಿ ರೂ., ಒಳಚರಂಡಿ ವ್ಯವಸ್ಥೆಗೆ 3 ಕೋಟಿ ರೂ., ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ 5 ಕೋಟಿ ರೂ., ಕಚೇರಿ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರೂ., ನಗರದ ಪ್ರಮುಖ ವೃತ್ತಗಳ ಅಭಿವೃದ್ಧಿಗೆ 30 ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ ಎಂದು ಹೇಳಿದರು.
ಬೇಸಿಗೆ ಕಾಲದಲ್ಲಿ ಕೆರೆಗಳ ಪುನಶ್ಚೇತನ ಹಾಗೂ ಗಿಡ ನೆಡುವ ಕಾರ್ಯಕ್ರಮಕ್ಕೆ 30 ಲಕ್ಷ ರೂ. ನಗರದ 35 ವಾರ್ಡುಗಳಲ್ಲಿ ಪಾರ್ಕ್‌ಗಳ ಅಭಿವೃದ್ಧಿಗೆ 2 ಕೋಟಿ ರೂ., ಪಾರಂಪರಿಕ ಇತಿಹಾಸವುಳ್ಳ ದನಗಳ ಜಾತ್ರಾ ಮಹೋತ್ಸವಕ್ಕೆ 10 ಲಕ್ಷ ರೂ., ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಘನತ್ಯಾಜ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಲು 25 ಲಕ್ಷ ರೂ., ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಸಮ್ಮೇಳನ, ಪತ್ರಕರ್ತರ ದಿನಾಚರಣೆಗೆ ನಗರಸಭೆ ನಿಧಿಯಿಂದ 10 ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ನಿಧಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಕಂಪ್ಯೂಟರ್ ವಿತರಣೆಗೆ 10 ಲಕ್ಷ ರೂ., ನಗರದ 35 ವಾರ್ಡುಗಳ ಪ್ರಮುಖ ವೃತ್ತಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲು 50 ಲಕ್ಷ ರೂ. ಸೇರಿದಂತೆ ಇನ್ನು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದು ಎಂದು ಹೇಳಿದರು.