ಹಾಸನ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಆಗ್ರಹಿಸಿ ಜೆಡಿಎಸ್ ಸದಸ್ಯರ ಪ್ರತಿಭಟನೆ

30HSN2
Published on

ಹಾಸನ: ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಮುಖಂಡರು ಹಾಗೂ ನಗರಸಭೆ ಸದಸ್ಯರು ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಉಪವಿಭಾಗಾಧಿಕಾರಿ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು ನ್ಯಾಯಕ್ಕಾಗಿ ಆಗ್ರಹಿಸಿ ಘೋಷಣೆ ಕೂಗಿದರು. ನಂತರ ಕೆಲಕಾಲ ಧರಣಿ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್.ದ್ಯಾವೇಗೌಡ, ಅ.29ರಂದು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿ ಮಾಡಲಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅಂದು ಬೆಳಗ್ಗೆ 10.50ಕ್ಕೆ ನಗರಸಭೆ ಕಾರ್ಯಾಲಯಕ್ಕೆ ಹೋದಾಗ ಅಲ್ಲಿನ ಸಿಬ್ಬಂದಿ ಈಗಷ್ಟೇ ಚುನಾವಣಾಧಿಕಾರಿ ತಮ್ಮ ಕಚೇರಿಗೆ ತೆರಳಿದರು. ನೀವು ಅಲ್ಲಿಯೂ ನಾಮಪತ್ರ ಸಲ್ಲಿಸಬಹುದು ಎಂದು ತಿಳಿಸಿದರು. ಬಳಿಕ 11 ಗಂಟೆ 5 ನಿಮಿಷಕ್ಕೆ ಉಪವಿಭಾಗಾಧಿಕಾರಿ ಕಚೇರಿ ತೆರಳಿದಾಗ ನಾಮಪತ್ರ ಸಲ್ಲಿಸಲು ಬೆಳಿಗ್ಗೆ 9 ರಿಂದ 11ರ ವರೆಗೆ ಅವಕಾಶ ನೀಡಲಾಗಿತ್ತು. ನೀವು ಅ ಸಮಯದಲ್ಲಿ ಸಲ್ಲಿಸಬೇಕಾಗಿತ್ತು ಎಂದು ಉಡಾಫೆಯಾಗಿ ಉತ್ತರಿಸಿದರು ಎಂದು ಆರೋಪಿಸಿದರು.

ಆಡಳಿತಾತ್ಮಕ ಗೊಂದಲದಿಂದ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಆಗಲಿಲ್ಲ. ಸಾಕಷ್ಟು ಕೇಳಿಕೊಂಡರೂ ಮನವಿ ಪತ್ರ ಸ್ವೀಕರಿಸಲಿಲ್ಲ. ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್ ಅವರು ಶಾಸಕ ಪ್ರೀತಂ ಜೆ.ಗೌಡ ಅವರ ಒತ್ತಾಯಕ್ಕೆ ಮಣಿದು ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ದೂರು ಅರ್ಜಿಯನ್ನು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ಸಲ್ಲಿಸಿದ್ದೇವೆ ಎಂದರು.
ಚುನಾವಣಾಧಿಕಾರಿ ನಮಗೆ ನೀಡಿರುವ ನೋಟಿಸ್‌ನ ನಮೂನೆ-1ರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸುವ ಉಲ್ಲೇಖವಿರುವ ಕ್ರ.ಸಂ. (2)ರಲ್ಲಿ ಗೊಂದಲವಿದೆ. ಹೀಗಾಗಿ ಚುನಾವಣೆಯನ್ನು ಮುಂದೂಡುವಂತೆ ಮನವಿ ಸಲ್ಲಿಸಲಾಯಿತು. ನಂತರ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಪ್ರಕಟಿಸಿದರು.

ಚುನಾವಣಾಧಿಕಾರಿ ಬಿ.ಎ.ಜಗದೀಶ್ ಅವರು ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ದಿನಾಂಕ ನಿಗದಿಪಡಿಸಿ, ಹೊಸ ಚುನಾವಣಾ ನೋಟಿಸ್ ನೀಡಬೇಕು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಿ, ನ್ಯಾಯಯುತ ಮತ್ತು ಪಾರದರ್ಶಕವಾದ ಚುನಾವಣೆ ನಡೆಸಬೇಕು. ತಪ್ಪಿದಲ್ಲಿ ನಗರಸಭೆ ಸದಸ್ಯರು ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೊರೆಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶುಕ್ರವಾರ ಸರ್ಕಾರಿ ರಜೆ ಇದ್ದ ಕಾರಣ ಉಪವಿಭಾಗಾಧಿಕಾರಿ ಕಚೇರಿ ಬಾಗಿಲು ತೆರೆದಿರಲಿಲ್ಲ. ಹಾಗಾಗಿ ಉಪವಿಭಾಗಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಯೂ ಆಗಿರುವ ಬಿ.ಎ. ಜಗದೀಶ್ ಅವರಿಗೆ ಮನವಿ ಪತ್ರವನ್ನು ಕೊರಿಯರ್, ಸ್ಪೀಡ್ ಪೋಸ್ಟ್ ಮತ್ತು ರಿಜಿಸ್ಟರ್ ಪೋಸ್ಟ್ ಮೂಲಕ ಕಳಿಸಿಕೊಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್, ನಗರಸಭೆ ಸದಸ್ಯರಾದ ಗಿರೀಶ್ ಚನ್ನವೀರಪ್ಪ, ಸಿ.ಆರ್. ಶಂಕರ್, ಎಚ್.ವಿ. ಚಂದ್ರೇಗೌಡ, ಕ್ರಾಂತಿ ಪ್ರಸಾದ್ ತ್ಯಾಗಿ, ಜೆ.ಮಂಜುನಾಥ, ಅಶ್ವಿನಿ, ನಸೀಮಾ ಬಾನು, ಕೆ.ಬಿ. ಜಾನಕಿ, ಜೆಡಿಎಸ್ ಮುಖಂಡರಾದ ಅಗಿಲೆ ಯೋಗೇಶ್, ಚನ್ನಂಗಿಹಳ್ಳಿ ಶ್ರೀಕಾಂತ್, ಕಮಲ್ ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net