ಹಾಸನ ನಗರದಲ್ಲಿ ಆಟೋರಿಕ್ಷಾ ದರ ನಿಗದಿ

03_HSN_03
ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಎಸ್ಪಿ ಹರಿರಾಮ್ ಶಂಕರ್, ಮಲ್ಲೇಶ್ ಇತರರು ಇದ್ದರು.
Published on

ಹಾಸನ: ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬಾಡಿಗೆ ಸಂಚಾರ ಸೇವೆ ಒದಗಿಸುವ ಆಟೋರಿಕ್ಷ್ಷಾಗಳ ಪ್ರಯಾಣ ದರವನ್ನು ಬೆಂಗಳೂರು ನಗರ ದರಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಗರಿಷ್ಠ ಮೂವರಿಗೆ ಆಟೋರಿಕ್ಷಾ ಕನಿಷ್ಠ ಪ್ರಯಾಣದರ ಮೊದಲ 2 ಕಿ.ಮೀ.ಗೆ 30 ರೂ. ಮತ್ತು ನಂತರದ ಪ್ರತಿ ಕಿ.ಮೀ.ಗೆ 15 ರೂ. ನಿಗದಿಪಡಿಸಲಾಗಿದೆ. ಕಾಯುವಿಕೆ ದರ ಮೊದಲ ಐದು ನಿಮಿಷ ಉಚಿತ, ನಂತರ ಪ್ರತಿ ಹದಿನೈದು ನಿಮಿಷಕ್ಕೆ 5 ರೂ. ಹಾಗೂ ಪ್ರಯಾಣಿಕರ ಲಗೇಜು ದರ 20 ಕೆಜಿಗೆ ಉಚಿತ, ನಂತರದ ಪ್ರತಿ 50 ಕೆಜಿಗೆ 5 ರೂ. ದರ ನಿಗದಿ ಮಾಡಲಾಗಿದೆ. ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಸಾಮಾನ್ಯ ಪ್ರಯಾಣ ದರದ ಒಂದೂವರೆ ಪಟ್ಟು ಬಾಡಿಗೆ ಪಡೆಯಲು ಸೂಚಿಸಲಾಗಿದೆ.

ಪ್ರಯಾಣದರ ನಿಗದಿಗೆ ಮೊದಲ 1.5 ಕಿ.ಮೀ. ಪ್ರಯಾಣಕ್ಕೆ 40 ರೂ. ಮತ್ತು ನಂತರದ ಪ್ರತಿ ಕಿ.ಮೀ.ಗೆ 20 ರೂ. ಪ್ರಯಾಣದರ ನಿಗದಿಪಡಿಸುವಂತೆ ಆಟೋರಿಕ್ಷಾ ಮತ್ತು ಮಾಲೀಕರ ಸಂಘ ಮನವಿ ಸಲ್ಲಿಸಿತು. ಆದರೆ ಪ್ರಾಧಿಕಾರದ ಇತರ ಸದಸ್ಯರೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮೇಲಿನಂತೆ ಪ್ರಯಾಣ ದರ ನಿಗದಿಪಡಿಸಿದರು.

ಕಟ್ಟುನಿಟ್ಟಿನ ಕ್ರಮ: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದಂತೆ ಕೆಎಸ್‌ಆರ್‌ಟಿಸಿ ಮತ್ತು ಇತರ ಎಲ್ಲ ಖಾಸಗಿ ಸಾರಿಗೆ ವಾಹನಗಳ ನಿರ್ವಾಹಕರು, ಪ್ರಯಾಣಿಕರಿಂದ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಬಸ್‌ಗಳಲ್ಲಿ ಚೂಯಿಂಗ್ ಗಮ್, ತಂಬಾಕು ಉಗಿಯುವುದು ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಸಂಚರಿಸುವ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಬಸ್‌ಗಳು ಲಭ್ಯವಾಗುವಂತೆ ಹಾಗೂ ಗ್ರಾಮೀಣ ಪ್ರದೇಶಗಳಿಗೂ ಬಸ್‌ಗಳ ಸಾರಿಗೆ ಸಂಪರ್ಕ ದೊರೆಯುವಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೇರಿದಂತೆ ನಗರದಲ್ಲಿ ಹಲವೆಡೆ ಅನಗತ್ಯವಾಗಿ ಬಸ್‌ಗಳ ನಿಲುಗಡೆ ಮಾಡುತ್ತಿದ್ದು ಅದನ್ನು ತಡೆಯುವಂತೆ ಸೂಚಿಸಲಾಯಿತು.

ಬಸ್ ಮತ್ತು ರೈಲು ನಿಲ್ದಾಣದಲ್ಲಿ ಮುಂಗಡ ಪಾವತಿ ಆಟೋರಿಕ್ಷಾ ಸೇವೆ ವ್ಯವಸ್ಥೆ ಮಾಡುವಂತೆ ಬಳಕೆದಾರರ ಸಂಘದ ಅಧ್ಯಕ್ಷ ರಂಗೇಗೌಡ ಮತ್ತು ಉಪಾಧ್ಯಕ್ಷ ಬೋರೇಗೌಡ ಮನವಿ ಮಾಡಿದರು. ಆಟೋರಿಕ್ಷಾ ಚಾಲಕರು ಮತ್ತು ಮಾಲಿಕರ ಸಂಘದ ಪದಾಧಿಕಾರಿಗಳಾದ ಸಮೀರ್, ಸುದರ್ಶನ್ ಮತ್ತು ಅಬ್ಬಾಸ್ ಅವರು ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಟಾಕ್ಸಿಗಳ ನಿಲುಗಡೆ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಿಸಿಟಿವಿ ಅಳವಡಿಸುವಂತೆ ಟ್ಯಾಕ್ಸಿ ಸ್ಟಾಂಡ್ ಅಧ್ಯಕ್ಷ ಸುದೀಪ್ ಮನವಿ ಮಾಡಿದರು.

ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲೇಶ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್ ದಾಸ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ಮೀಟರ್ ಕಡ್ಡಾಯ: ನಗರದಲ್ಲಿ ಆಟೋ ಸಂಚಾರ ವ್ಯವಸ್ಥೆ ಸುಧಾರಣೆಗೆ ಕ್ರಮ ವಹಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿರುವ ಆಟೋರಿಕ್ಷಾ ಪ್ರಯಾಣ ದರವನ್ನೇ ಹಾಸನ ನಗರಕ್ಕೂ ನಿಗದಿ ಮಾಡಿರುವುದರಿಂದ ಮಾಲೀಕರಿಗೆ ಮತ್ತು ಚಾಲಕರಿಗೆ ನಷ್ಟವಾಗುವುದಿಲ್ಲ. ಆಟೋರಿಕ್ಷಾ ಮೀಟರ್‌ಗಳ ಕ್ಯಾಲಿಬ್ರೇಷನ್ ಸರಿಪಡಿಸಿಕೊಂಡು ಕಡ್ಡಾಯವಾಗಿ ಮೀಟರ್ ಹಾಕಿಕೊಂಡೇ ಆಟೋರಿಕ್ಷಾ ಓಡಿಸಬೇಕು. ನಿಗದಿಪಡಿಸಿದ ನ್ಯಾಯಸಮ್ಮತ ಪ್ರಯಾಣದರವನ್ನೇ ಪ್ರಯಾಣಿಕರಿಂದ ಪಡೆಯಬೇಕು. ರಾತ್ರಿ ವೇಳೆ ದುಬಾರಿ ಬಾಡಿಗೆ ಪಡೆಯುವ ದೂರುಗಳು ಕೇಳಿಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net