ಹಾಸನ ದಸರಾ ಸಂಪನ್ನ

ಹಾಸನ ದಸರಾ ಸಂಪನ್ನ
Published on

ಹಾಸನ: ವಿಜಯದಶಮಿ ಅಂಗವಾಗಿ ಪ್ರತಿವರ್ಷದಂತೆ ಬುಧವಾರ ಸಂಜೆ ನಗರದ ಬನ್ನಿ ಮಂಟಪದಲ್ಲಿ ಶಾಸಕ ಪ್ರೀತಂ ಗೌಡರ ಸಮ್ಮುಖದಲ್ಲಿ ನರಸಿಂಹರಾಜ ಅರಸು ಅವರು ಬಾಳೆಕಂದಿನೊಂದಿಗೆ ಬನ್ನಿ ಸೊಪ್ಪು ಕಡಿಯುವ ಮೂಲಕ ದಸರಾ ಹಬ್ಬಕ್ಕೆ ಮಂಗಳ ಹಾಡಿದರು.

ಪ್ರತಿ ವರ್ಷ ಮೈಲಾರಲಿಂಗೇಶ್ವರ, ಚನ್ನಕೇಶವ, ವಿರೂಪಾಕ್ಷ, ಆಂಜನೇಯ ಸ್ವಾಮಿ ಮತ್ತು ಸಿದ್ದೇಶ್ವರ ಸ್ವಾಮಿ ದೇವರ ಉತ್ಸವ ಮೂರ್ತಿಗಳನ್ನು ಅಡ್ಡೆಗಳ ಮೇಲೆ ಕೂರಿಸಿ ಹೊತ್ತು ಹಾಸನಾಂಬ ವೃತ್ತದಿಂದ ಮೆರವಣಿಗೆ ಮೂಲಕ ಸಾಲಗಾಮೆ ರಸ್ತೆ ಬಳಿಯ ಐತಿಹಾಸಿಕ ಬನ್ನಿ ಮಂಟಪಕ್ಕೆ ತರಲಾಗುತ್ತಿತ್ತು. ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಕಾರಣದಿಂದ ಉತ್ಸವ ಮೂರ್ತಿಗಳನ್ನು ಹೊತ್ತು ತರದೆ, ಟ್ರಾೃಕ್ಟರ್‌ನಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗಿತ್ತು.

ಆದರೆ ಈ ವರ್ಷ ಕೋವಿಡ್ ಆತಂಕ ಇಲ್ಲದಿದ್ದರೂ ನೀರು ಬಾಗಿಲು ಆಂಜನೇಯ ಸ್ವಾಮಿ ಮತ್ತು ಸಿದ್ದೇಶ್ವರಸ್ವಾಮಿ ಉತ್ಸವ ಮೂರ್ತಿಗಳನ್ನು ಟ್ರಾೃಕ್ಟರ್‌ನಲ್ಲಿ ಮೆರವಣಿಗೆ ಮಾಡಲು ಹೊರಟಾಗ ಭಕ್ತರು ವಿರೋಧ ವ್ಯಕ್ತಪಡಿಸಿ, ಅಡ್ಡೆಗಳ ಮೂಲಕವೇ ಹೊತ್ತು ತಂದರು. ಉಳಿದ ಮೂರು ದೇವರ ಉತ್ಸವ ಮೂರ್ತಿಗಳನ್ನು ಟ್ರಾೃಕ್ಟರ್‌ನಲ್ಲಿ ತರಲಾಯಿತು.

ಅರಕಲಗೂಡು ಮತ್ತಿತರ ಸ್ಥಳಗಳಲ್ಲಿ ನಡೆಯುವಂತೆ ಹಾಸನದಲ್ಲೂ ವಿಜಯದಶಮಿ ದಿನ ದಸರಾ ಹಬ್ಬವನ್ನು ಸರ್ಕಾರದ ಅನುದಾನದ ಮೂಲಕ ಅದ್ಧೂರಿ ಆಗಿ ಆಚರಿಸಬೇಕು ಎಂದು ಸ್ಥಳದಲ್ಲಿದ್ದ ಶಾಸಕರಲ್ಲಿ ಭಕ್ತರು ಮನವಿ ಮಾಡಿಕೊಂಡರು.

ನರಸಿಂಹರಾಜ ಅರಸು ಅವರು ಕಳೆದ 32 ವರ್ಷಗಳಿಂದ ವಿಜಯದಶಮಿ ದಿನ ಬನ್ನಿ ಕಡೆಯುವ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಉಪವಾಸ ಇದ್ದು, ಆಯುಧ ಪೂಜೆಯ ದಿನ ಖಡ್ಗಕ್ಕೆ ಶಾಸ್ತ್ರೋಕ್ತ ಪೂಜೆ ಸಲ್ಲಿಸುತ್ತಾರೆ. ಮರುದಿನ ವಿಜಯದಶಮಿ ದಿನದಂದು ಬನ್ನಿ ಕಡಿಯುವ ಮೂಲಕ ದಸರಾ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ. ತಮ್ಮ ವಾಸಕ್ಕೆ ಒಂದು ನಿವೇಶನ ಅಥವಾ ಮನೆ ಕೊಡಿ ಎಂಬುದಾಗಿ ನರಸಿಂಹರಾಜ ಅರಸು ಅನೇಕ ವರ್ಷಗಳಿಂದ ಬೇಡಿಕೆ ಇಡುತ್ತಲೇ ಬರುತ್ತಿದ್ದಾರೆ. ಆದರೆ ಇದುವರೆಗೂ ಈಡೇರಿಲ್ಲ.

ಕ್ಷೇತ್ರದ ಶಾಸಕ ಪ್ರೀತಮ್ ಗೌಡ ಮಾತನಾಡಿ, ಹಲವಾರು ದಶಕಗಳಿಂದ ವಿಜಯದಶಮಿ ಉತ್ಸವ ನಡೆದುಕೊಂಡು ಬರುತ್ತಿದೆ. ಕಳೆದ 32 ವರ್ಷಗಳಿಂದ ಬನ್ನಿ ಕಡಿಯುವ ಮೂಲಕ ದಸರಾ ಹಬ್ಬದ ವಿಧಿ ನೆರವೇರಿಸುತ್ತಿರುವ ನರಸಿಂಹರಾಜ ಅರಸು ಅವರಿಗೆ ದೇವರು ಮತ್ತಷ್ಟು ಶಕ್ತಿ ಕೊಡಲಿ, ಜಿಲ್ಲೆಯ ಜನತೆಗೆ ಒಳಿತಾಗಲಿ ಎಂದು ಹೇಳಿದರು.

ನರಸಿಂಹರಾಜ ಅರಸು ಅವರ ನಿವೇಶನ ಬೇಡಿಕೆ ವಿಚಾರ ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ಪ್ರತಿವರ್ಷ ಅವರು ಈ ಬೇಡಿಕೆ ಇಡುತ್ತಿದ್ದಾರೆ ಎಂದಷ್ಟೇ ಹೇಳಿ ನಿರ್ಗಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net