ಹಾಸನ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿದ ಮಳೆಯಿಂದಾಗಿ 450 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಸಂಭವಿಸಿದೆ. ಜಿಲ್ಲೆಯಲ್ಲಿ ಮಾರ್ಚ್‌ನಿಂದ ಇಲ್ಲಿಯವರೆಗೂ 1650 ಮನೆಗಳು ಕುಸಿದಿವೆ. ಕಳೆದ ನಾಲ್ಕು ದಿನಗಳಲ್ಲಿ 350 ಮನೆಗಳು ಕುಸಿದಿವೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಾಸರಿ ಪ್ರತಿದಿನ 25 ರಿಂದ 30 ಮಿಮೀ ಮಳೆಯಾಗುತ್ತಿದೆ. ನಿನ್ನೆ ಒಂದೇ ದಿನ ಸಕಲೇಶಪುರ ತಾಲೂಕಿನ ಹೆತ್ತೂರು, ಹೆಗ್ಗದ್ದೆ ಭಾಗದಲ್ಲಿ 150 ಮಿಮೀ ಮಳೆ ಸುರಿದಿದೆ ಎಂದು ಮಾಹಿತಿ ನೀಡಿದರು.
ಪರಿಹಾರ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ತುರ್ತು ಪರಿಹಾರ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ಅರಸೀಕೆರೆ ತಗ್ಗುಪ್ರದೇಶದಲ್ಲಿ ನೀರು ನುಗ್ಗಿದ್ದ ಮನೆಗಳಿಗೆ ತಲಾ ಹತ್ತು ಸಾವಿರ ರೂ. ಪರಿಹಾರ ನೀಡಲಾಗಿದೆ. 50 ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಜನರು ಜಾಗೃತರಾಗಿ ಮುನ್ನೆಚ್ಚರಿಕೆ ವಹಿಸಬೇಕು. ಮನೆ ಶಿಥಿಲಗೊಂಡಿದ್ದರೆ ಕೂಡಲೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಥವಾ ಗ್ರಾಮ ಲೆಕ್ಕಾಧಿಕಾರಿಗೆ ತಿಳಿಸಿದರೆ, ಆಸರೆಗೆ ಬದಲಿ ವ್ಯವಸ್ಥೆ ಮಾಡಲಾಗುವುದು ಎಂದರು.
ಭಾರಿ ವಾಹನ ಸಂಚಾರಕ್ಕೆ ಶೀಘ್ರ ಅನುಮತಿ:
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಕಲೇಶಪುರ ತಾಲೂಕು ದೋಣಿಗಾಲ್ ಸಮೀಪ ಬದಲಿ ರಸ್ತೆ ಕಾಮಗಾರಿ ಅಂತಿಮ ಹಂತ ತಲುಪಿದೆ. ಮಳೆಯಿಂದ ಕಾಮಗಾರಿಗೆ ಸ್ವಲ್ಪ ಅಡ್ಡಿಯಾಗಿದೆ. ವಾರಾಂತ್ಯದೊಳಗೆ ಕಾಮಗಾರಿ ಮುಗಿಯಲಿದ್ದು, ನಂತರ ಭಾರೀ ವಾಹನಗಳ ಸಂಚಾರಕ್ಕೂ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.
ಬಹುತೇಕ ಕೆರೆಗಳು ಭರ್ತಿ:
ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ ಸುಮಾರು 6500 ಕೆರೆಗಳಿವೆ. 3000 ಸಾವಿರ ಕೆರೆಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತವೆ. ಬಹುತೇಕ ಎಲ್ಲಾ ಕೆರೆಗಳು ತುಂಬಿವೆ. ಭರ್ತಿಯಾಗಿ ಅಪಾಯದ ಸ್ಥಿತಿಯಲ್ಲಿರುವ ಕೆರೆಗಳ ಕೋಡಿಗಳನ್ನು ವೈಜ್ಞಾನಿಕವಾಗಿ ಒಡೆದು ನೀರಿನ ಸಂಗ್ರಹ ಕಡಿಮೆ ಮಾಡಲು ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
ವಿಂಧ್ಯಗಿರಿ: 10 ದಿನಗಳಲ್ಲಿ ಕೆಲಸ ಶುರು:
ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದಲ್ಲಿ ಕೋಟೆ ತಡೆಗೋಡೆ ಕುಸಿತ ಕುರಿತು ಕೇಂದ್ರ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದೆ. ಟೆಂಡರ್ ಕರೆಯಲು 25 ದಿನಗಳ ಕಾಲಾವಕಾಶ ಕೇಳಿದ್ದಾರೆ. ಪ್ರವಾಸಿಗರು ಹಾಗೂ ಭಕ್ತರಿಗೆ ನಿಷೇಧ ಹೇರಿರುವುದರಿಂದ ಅಷ್ಟು ಸಮಯ ನೀಡಲು ಆಗುವುದಿಲ್ಲ, ಆದಷ್ಟು ಬೇಗ ಟೆಂಡರ್ ಕರೆಯಬೇಕು ಎಂಬುದಾಗಿ ಸೂಚಿಸಲಾಗಿದೆ. ಇನ್ನು 10 ದಿನದೊಳಗೆ ಕೆಲಸ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಮಿಂಚು ಬಂಧಕವನ್ನು ನಾಲ್ಕು ದಿನಗಳಲ್ಲಿ ದುರಸ್ತಿ ಮಾಡಲಾಗುವುದು ಎಂದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜು ಉಪಸ್ಥಿತರಿದ್ದರು.
ಮಳೆಗಾಲದಲ್ಲಿ ಗೊಬ್ಬರ ಹಾಕಬೇಡಿ:
ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಮಾತನಾಡಿ, ಜಿಲ್ಲೆಗೆ ಕಳೆದ ಜುಲೈ ಅಂತ್ಯವರೆಗೆ 35,000 ಮೆಟ್ರಿಕ್ ಟನ್ ಯೂರಿಯಾ ಅಗತ್ಯ ಇತ್ತು. ಅಗತ್ಯಕ್ಕಿಂತ ಹೆಚ್ಚು ಅಂದರೆ 38,00 ಮೆಟ್ರಿಕ್ ಟನ್ ಯೂರಿಯಾ ಸರಬರಾಜಾಗಿತ್ತು. ಆದರೆ ರೈತರು ವಿಪರೀತ ಮಳೆಯ ನಡುವೆಯೂ ಯೂರಿಯಾ ಬೆಳೆಗಳಿಗೆ ಯೂರಿಯಾ ಹಾಕಿ ವ್ಯರ್ಥ ಮಾಡಿರುವುದರಿಂದ ಸಮಸ್ಯೆ ಸೃಷ್ಟಿಯಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿದ್ದ ಜಂಟಿ ಕೃಷಿ ನಿರ್ದೇಶಕ ಎಚ್.ಕೆ. ರವಿ ಸ್ಪಷ್ಟಪಡಿಸಿದರು.
ಬೇಡಿಕೆ ಇದ್ದು, 38 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಬಂದಿದೆ. ಆದರೆ ನಿರಂತರ ಮಳೆಯ ನಡುವೆಯೂ ರೈತರು ಹೆಚ್ಚು ಯೂರಿಯಾ ಬಳಕೆ ಮಾಡಿರುವುದರಿಂದ ಕೊರತೆಯಾಗಿದೆ. ಮಳೆ ವೇಳೆ ಗೊಬ್ಬರ ಹಾಕುವುದರಿಂದ ಯಾವುದೇ ಪ್ರಯೋಜನವಾಗದು ಎಂದರು. ಆಗಸ್ಟ್ ತಿಂಗಳಲ್ಲಿ ಈಗಾಗಲೇ 4500 ಮೆ.ಟನ್ ಯೂರಿಯಾ ಜಿಲ್ಲೆಗೆ ಸರಬರಾಜಾಗಿದ್ದು, ಭಾನುವಾರ ಮತ್ತೆ 1000 ಮೆಟ್ರಿಕ್ ಟನ್ ಬರಲಿದೆ. ಆದ್ದರಿಂದ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.