

ಹಾಸನ: ಮುಂಗಾರು ಆರಂಭಕ್ಕೂ ಮುನ್ನವೇ ಮುಂಗಾರು ಪೂರ್ವ ಮಳೆ ಅಬ್ಬರ ಮುಂದುವರಿದಿದ್ದು ಮಂಗಳವಾರ ಹಾಸನ ನಗರ ಸೇರಿದಂತೆ ಜಿಲ್ಲಾದ್ಯಂತ ಭರ್ಜರಿ ಮಳೆ ಸುರಿದಿದೆ. ಮುಂದಿನ ಆರು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಸೋಮವಾರ ರಾತ್ರಿಯಿಂದ ಆರಂಭವಾದ ಮಂಗಳವಾರ ಮಧ್ಯಾಹ್ನದವರೆಗೂ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಯಿತು. ಕಚೇರಿಗೆ ಹೋಗುವ ನೌಕರರು, ವ್ಯಾಪಾರಿಗಳು, ಉದ್ಯೋಗಿಗಳು ಪರದಾಡುವಂತಾಯಿತು. ಮಧ್ಯಾಹ್ನದ ನಂತರ ಮಳೆ ಕಡಿಮೆಯಾಗುತ್ತಿದ್ದಂತೆ ವಾಹನ ಸಂಚಾರ ಹೆಚ್ಚಾಗಿ ನಗರದ ಬಹುತೇಕ ಕಡೆ ಸಂಚಾರ ದಟ್ಟಣೆ ಉಂಟಾಯಿತು.
ಕಳೆದ 24 ಗಂಟೆಯಲ್ಲಿ (ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ) ಜಿಲ್ಲೆಯ ಅರಸೀಕೆರೆ ನಗರದಲ್ಲಿ 47.1 ಮಿ.ಮೀ. ದಾಖಲೆಯ ಮಳೆಯಾಗಿದೆ. ಗಂಡಸಿಯಲ್ಲಿ 40.8 ಮಿ.ಮೀ. ಮತ್ತು ಹಳ್ಳಿಮೈಸೂರಿನಲ್ಲಿ 35.5 ಮಿ.ಮೀ. ಹೋಬಳಿಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾದ ವರದಿಯಾಗಿದೆ. ಮಳೆಯಿಂದ ಯಾವುದೇ ರೀತಿಯ ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ. ಚನ್ನರಾಯಪಟ್ಟಣದ ಹಿರೀಸಾವೆ ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದೆ.
ಸಾಲಗಾಮೆ ರಸ್ತೆಯಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಗೆ ಮಳೆ ತೀವ್ರ ಅಡ್ಡಿ ತಂದೊಡ್ಡಿತು. ಮಳೆಯ ನಡುವೆಯೇ ವ್ಯಾಪಾರಸ್ಥರನ್ನು ಟೆಂಟ್‌ಗಳನ್ನು ಹಾಕಿ ವ್ಯಾಪಾರ ಆರಂಭಿಸಿದರು. ಗ್ರಾಹಕರು ಛತ್ರಿಗಳನ್ನು ಹಿಡಿದು ತಮಗೆ ಬೇಕಾದ ತರಕಾರಿ, ಹೂ, ಹಣ್ಣು ಖರೀದಿಸುತ್ತಿದ್ದರು.
ಭಾರಿ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಜೀವನದಿ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಒಳಹರಿವಿನಲ್ಲಿ ಭಾರಿ ಹೆಚ್ಚಳವಾಗಿದ್ದು 25,888 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2922.00 ಅಡಿಗಳಾಗಿದ್ದು, ಇಂದಿನ ನೀರಿನ ಮಟ್ಟ 2906.25 ಅಡಿಗಳಷ್ಟಿದೆ. ಜಲಾಶಯವು 37.103 ಟಿಎಂಸಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, 23.945 ಟಿಎಂಸಿ ನೀರಿನ ಸಂಗ್ರಹವಾಗಿದೆ.