

ಹಾಸನ : ಜಿಲ್ಲೆಯ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಬಾರಿ ಹಾಸನ ಜಿಲ್ಲೆ ರಾಜ್ಯಮಟ್ಟದಲ್ಲಷ್ಟೇ ಅಲ್ಲದೇ, ರಾಷ್ಟ್ರಮಟ್ಟದಲ್ಲೂ ಭಾರೀ ಸದ್ದು ಮಾಡುತ್ತಿದೆ. ಕಾರಣ, ಎರಡು ಪಕ್ಷಗಳ ರಾಷ್ಟ್ರೀಯ ನಾಯಕರು ಜಿಲ್ಲೆಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಈಗಾಗಲೇ ಬಿಜೆಪಿಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಲೂರ- ಸಕಲೇಶಪುರ ತಾಲೂಕಿನಲ್ಲಿ ರೋಡ್ ಶೋ ನಡೆಸಿ, ಪಕ್ಷದ ಅಭ್ಯರ್ಥಿ ಪರ ಭರ್ಜರಿ ಮಾಡಿದ್ದರು. ಅಲ್ಲದೇ, ಏ.30ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಪ್ರಚಾರಕ್ಕಾಗಿ ಜಿಲ್ಲೆಗೆ ಬರುತ್ತಿದ್ದು, ಬೇಲೂರಿನಲ್ಲಿ ಸಮಾವೇಶ ಮಾಡಲಿದ್ದಾರೆ. ಇದರ ನಡುವೆ ಕಾಂಗ್ರೆಸ್ ಕೂಡ ಜಿಲ್ಲೆಯಲ್ಲಿ ಭರ್ಜರಿ ಪ್ರಚಾರ ಮಾಡಲು ತಯಾರಿ ಮಾಡಿಕೊಂಡಿದೆ.
ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಯ ಸಕಲೇಶಪುರ ಹಾಗೂ ಅರಕಲಗೂಡಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಶನಿವಾರ ಸಂಜೆ ಸಕಲೇಶಪುರದಲ್ಲಿ ಸಮಾವೇಶ ಆಯೋಜಿಸಲಾಗಿದ್ದು, ಅಭ್ಯರ್ಥಿ ಮುರುಳಿ ಮೋಹನ್ ಪರವಾಗಿ ಹಾಗೂ ರಾತ್ರಿ ಅರಕಲಗೂಡಿನಲ್ಲಿ ಅಭ್ಯರ್ಥಿ ಎಚ್.ಪಿ. ಶ್ರೀಧರ್‌ಗೌಡ ಪರವಾಗಿ ಖರ್ಗೆ ಹಾಗೂ ಡಿಕೆಶಿ ಮತಯಾಚನೆ ಮಾಡಲಿದ್ದಾರೆ.
ಇವರು ಬಂದು ಹೋದ ಬಳಿಕ ಮೇ 1ರಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಜಿಲ್ಲೆಗೆ ಆಗಮಿಸಲಿದ್ದಾರೆ. ಜಿಲ್ಲೆಯ ಅರಸೀಕೆರೆಗೆ ಬರುವ ರಾಹುಲ್ ಗಾಂಧಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ. ಶಿವಲಿಂಗೇಗೌಡ ಪರ ಪ್ರಚಾರ ಮಾಡಲಿದ್ದಾರೆ.
ಸಿದ್ದರಾಮಯ್ಯ ಗೈರು
ಅರಕಲಗೂಡು ಹಾಗೂ ಸಕಲೇಶಪುರ ಅಭ್ಯರ್ಥಿಗಳ ಪ್ರಚಾರಕ್ಕೆ ಎಐಸಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಬರುತ್ತಿದ್ದರೂ ಸಿದ್ದರಾಮಯ್ಯ ಅವರು ಮಾತ್ರ ಗೈರಾಗುತ್ತಿರುವುದು ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ. ಅರಕಲಗೂಡಿನಲ್ಲಿ ಸುಮಾರು 43 ಸಾವಿರದಷ್ಟು ಕುರುಬ ಸಮುದಾಯದ ಮತದಾರರು ಇದ್ದಾರೆ. ಸಿದ್ದರಾಮಯ್ಯ ಅವರು ಈ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದಾಗಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇವರು ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದರೆ ಚುನಾವಣೆ ಅಖಾಡವೇ ಬದಲಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ಅವರು ಏಕೆ ಪ್ರಚಾರಕ್ಕೆ ಬರುತ್ತಿಲ್ಲ ಎಂಬ ಕುತೂಹಲ ಮೂಡಿದೆ. ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ಅನ್ನು ತಮ್ಮ ಬೆಂಬಲಿಗರಾದ ಎಂ.ಟಿ. ಕೃಷ್ಣೇಗೌಡ ಅವರಿಗೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೂ ಕೊನೇ ಘಳಿಗೆಯಲ್ಲಿ ಡಿಕೆಶಿ ಹಠಕ್ಕೆ ಬಿದ್ದು ತಮ್ಮ ಬೆಂಬಲಿಗರಾದ ಎಚ್.ಪಿ. ಶ್ರೀಧರ್‌ಗೌಡ ಅವರಿಗೆ ಟಿಕೆಟ್ ನೀಡಿದ್ದರು. ಹೀಗಾಗಿ ಸಹಜವಾಗಿ ಸಿದ್ದರಾಮಯ್ಯ ಅವರು ಅಸಮಾಧಾನಗೊಂಡಿದ್ದು, ಈ ಕ್ಷೇತ್ರದ ಪ್ರಚಾರದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಕೃಷ್ಣೇಗೌಡ ಅವರಿಗೆ ಪರೋಕ್ಷವಾಗಿ ಸಿದ್ದರಾಮಯ್ಯ ಅವರು ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಕುರುಬ ಸಮುದಾಯ ಹಲವು ಮುಖಂಡರು ಪಕ್ಷೇತರವಾಗಿ ಸ್ಪರ್ಧೆ ಮಾಡಿರುವ ಕೃಷ್ಣೇಗೌಡರಿಗೆ ಬೆಂಬಲ ಸೂಚಿಸಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಅಂದರೆ, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ, ಟಿಕೆಟ್ ಸಿಗದಿದ್ದಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕುರುಬ ಸಮುದಾಯದ ಮುಖಂಡ ಸಿ.ಡಿ. ದಿವಾಕರಗೌಡ ಕಳೆದ ವಾರ ಕಾಂಗ್ರೆಸ್ ಅಭ್ಯರ್ಥಿ ಶ್ರೀಧರ್‌ಗೌಡಗೆ ಬೆಂಬಲ ಸೂಚಿಸಿ, ತಮ್ಮ ನಾಮಪತ್ರ ಹಿಂಪಡೆದಿದ್ದರು. ಇದೀಗ ದಿವಾಕರಗೌಡ ಅವರು ಕಳೆದ ಎರಡು ದಿನಗಳ ಹಿಂದೆ ಎಂ.ಟಿ. ಕೃಷ್ಣೇಗೌಡ ಅವರಿಗೆ ಬೆಂಬಲ ನೀಡಿದ್ದಾರೆ.
ಸಕಲೇಶಪುರ, ಅರಕಲಗೂಡು ಏಕೆ?
ಆಲೂರು-ಸಕಲೇಶಪುರ-ಕಟ್ಟಾಯ ಎಸ್ಸಿ ಮೀಸಲಾತಿ ಕ್ಷೇತ್ರವಾಗಿದೆ. ಅದೇ ಸಮುದಾಯದ ಪ್ರಬಲ ನಾಯಕರು ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕ್ಷೇತ್ರಕ್ಕೆ ಬಂದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ವರದಾನವಾಗಬಹುದು. ಹಾಗೆಯೇ ಒಕ್ಕಲಿಗ ಸಮುದಾಯ ಅಧಿಕವಾಗಿರುವ ಅರಕಲಗೂಡಿಗೆ ಅದೇ ಸಮುದಾಯಕ್ಕೆ ಸೇರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಚಾರ ಅಭ್ಯರ್ಥಿಗೆ ಸಹಕಾರಿಯಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಜಿಲ್ಲೆಯ ಈ ಎರಡು ಕ್ಷೇತ್ರಗಳಿಗೆ ಈ ಇಬ್ಬರು ನಾಯಕರು ಬರುತ್ತಿದ್ದಾರೆ. ಆದರೆ, ಇದು ಎಷ್ಟರ ಮಟ್ಟಿಗೆ ಫಲಪ್ರದವಾಗಲಿದೆ ಎಂಬುದನ್ನು ಕಾದು ನೋಡಬೇಕು.
ಅರಸೀಕೆರೆಗೆ ರಾಹುಲ್ ಗಾಂಧಿ
ಮೇ 1ರಂದು ರಾಹುಲ್ ಗಾಂಧಿ ಅವರು ಅರಸೀಕೆರೆಗೆ ಬರಲಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಏಕೆಂದರೆ, ಜೆಡಿಎಸ್‌ನಿಂದ ಮೂರು ಬಾರಿ ಶಾಸಕರಾಗಿದ್ದ ಕೆ.ಎಂ. ಶಿವಲಿಂಗೇಗೌಡ ಅವರನ್ನು ಕಾಂಗ್ರೆಸ್ ಕರೆತಂದು ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಅವರ ಪಾತ್ರವೂ ಪ್ರಮುಖವಾಗಿದೆ. ಹೀಗಾಗಿ ಶಿವಲಿಂಗೇಗೌಡ ಪರ ಪ್ರಚಾರಕ್ಕೆ ಸಿದ್ದರಾಮಯ್ಯ ಅವರು ಬರಬಹುದು ಎನ್ನಲಾಗುತ್ತಿದೆ.