

ಹಾಸನ ಜಿಲ್ಲಾದ್ಯಂತ ರಾಮನವಮಿಯನ್ನು ಸಂಘ-ಸಂಸ್ಥೆಯವರು ಹಾಗೂ ಭಕ್ತರು ಗುರುವಾರ ಶದ್ಧಾಭಕ್ತಿಯಿಂದ ಆಚರಿಸಿದರು. ಎಲ್ಲೆಡೆ ಶ್ರೀರಾಮನ ನಾಮಸ್ಮರಣೆ, ಜೈಯಘೋಷಗಳು ಮೊಳಗಿದವು.
ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಶ್ರೀರಾಮ, ಲಕ್ಷ್ಮಣ, ಸೀತೆ ಹಾಗು ಹನುಮನಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಿದ್ದರಿಂದ ಶೋಭಯಾತ್ರೆ, ಮರವಣಿಗೆಗಳಿಗೆ ಅವಕಾಶವಿರಲಿಲ್ಲ. ಪ್ರಮುಖ ವೃತ್ತಗಳಲ್ಲಿ ಶ್ರೀರಾಮನ ಭಕ್ತರು ಶ್ರೀರಾಮನ ಫೋಟೋಗಳಿಗೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿ, ಪ್ರಸಾದ ವಿತರಿಸಿ ಭಕ್ತಿ ಸಮರ್ಪಿಸಿದರು.
ನಗರದ ಪಾರ್ಕ್ ರಸ್ತೆಯಲ್ಲಿರುವ ಸೀತಾರಾಮಾಂಜನೆ ದೇವಾಲಯದಲ್ಲಿ ಒಂದು ವಾರದಿಂದ ಶ್ರೀರಾಮನ ಪಟ್ಟಾಭಿಷೇಕ ಕಾರ್ಯಕ್ರಮ ಜರುಗಿತು. ಸಂಜೆ ನಡೆದ ಭಜನಾ ಕಾರ್ಯಕ್ರಮ ಭಕ್ತರು ಭಾಗವಹಿಸಿ ಶ್ರೀರಾಮನ ದರ್ಶನ ಪಡೆದು, ರಾಮ ನಾಮಸ್ಮರಣೆ ಮಾಡಿದರು.
ನಗರದ ನೀರುವಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜಾಕಾರ್ಯ, ಲೋಕ ಕಲ್ಯಾಣಕ್ಕಾಗಿ ಹೋಮಗಳು ಜರುಗಿದವು. ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಬಸಟ್ಟಿ ಕೊಪ್ಪಲು ರಸ್ತೆ, ರೈಲು ನಿಲ್ದಾಣ, ಹೇಮಾವತಿ ವೃತ್ತ, ಸಹ್ಯಾದ್ರಿ ವೃತ್ತ, ಎಂ.ಜಿ. ರಸ್ತೆ ಸೇರಿಂದ ನಗರದ ವಿವಿಧ ದೇಗುಲಗಳಲ್ಲಿ, ರಾಮ ಮಂದಿರಗಳಲ್ಲಿ ರಾಮ ನಮಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಹಿಂದುಗಳ ಪಾಲಿಗೆ ಈ ದಿನ ಶುಭ ಹಾಗು ಸಮೃದ್ಧಿದಾಯಕವಾಗಿದ್ದು, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ರಾಮನವಮಿ ಆಚರಿಸುವುದರಿಂದ ಈ ದಿನದಂದು ಭಕ್ತರು ಉಪವಾಸವಿದ್ದು, ರಾಮನ ದೇವಾಲಯಗಳಿಗೆ ಭೇಟಿ ನೀಡಿ ರಾಮನನ್ನು ಪ್ರಾರ್ಥಿಸಿ ಇಷ್ಟಾರ್ಥ ಸಿದ್ಧಿ ಈಡೇರಿಸುವಂತೆ ಪ್ರರ್ಥಿಸಿ, ಶ್ರೀರಾಮನ ದರ್ಶನ ಪಡೆದರು.
ಶ್ರೀರಾಮನವಮಿ ಎಂಬುದು ಹಿಂದು ಸಂಪ್ರದಾಯದಲ್ಲಿ ಸಾಕಷ್ಟು ಪಾವಿತ್ರತೆ ಪಡೆದುಕೊಂಡಿದ್ದು, ಹಿಂದುಗಳು ಈ ದಿನವನ್ನು ಶ್ರದ್ಧೆಯಿಂದ ಆಚರಿಸಿ ಭಕ್ತ ಸಮರ್ಪಿಸಿದರು.