

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ 14,338 ಕೋಟಿ ರೂ. ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಜಿಲ್ಲಾಧಿಕಾರಿ ಡಾ.ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದರು.
ಜಿಲ್ಲಾ ವಾರ್ಷಿಕ ಸಾಲ ಯೋಜನೆಯಡಿ ಆದ್ಯತಾ ವಲಯಕ್ಕೆ 12,138 ಕೋಟಿ ರೂ.ಗಳನ್ನು ಮೀಸಲಿರಿಸಿದ್ದು, ಕೃಷಿ ಕ್ಷೇತ್ರಕ್ಕೆ 8,426.07 ಕೋಟಿ ರೂ., ಕೈಗಾರಿಕಾ ಕ್ಷೇತ್ರಕ್ಕೆ 3216.55 ಕೋಟಿ ರೂ., ವ್ಯಾಪಾರ ಹಾಗೂ ಇತರೆ ಸೇವೆಗಳಿಗೆ 495.97 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಲೂರು ತಾಲ್ಲೂಕಿನಲ್ಲಿ 720.41 ಕೋಟಿ ರೂ., ಅರಕಲಗೂಡು ತಾಲೂಕು 1262.29 ಕೋಟಿ ರೂ., ಅರಸೀಕೆರೆ ತಾಲೂಕು 1465.29 ಕೋಟಿ ರೂ., ಬೇಲೂರು ತಾಲೂಕು 1221.59 ಕೋಟಿ ರೂ., ಚನ್ನರಾಯಪಟ್ಟಣ ತಾಲೂಕು 2090.28 ಕೋಟಿ ರೂ., ಹಾಸನ ತಾಲೂಕು 5762.82 ಕೋಟಿ ರೂ., ಹೊಳೆನರಸೀಪುರ ತಾಲೂಕು 961.48 ಕೋಟಿ ರೂ., ಸಕಲೇಶಪುರ ತಾಲೂಕು 853.86, ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್ 32.50, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 12.79, ಹಾಸನ ಡಿ.ಸಿ.ಸಿ ಬ್ಯಾಂಕ್ 10.16, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 9.79, ಕರ್ನಾಟಕ ಗ್ರಾಮೀಣ ಬ್ಯಾಂಕ್ 8.36, ಬ್ಯಾಂಕ್ ಆಫ್ ಬರೋಡಾ 7.97, ಕರ್ನಾಟಕ ಬ್ಯಾಂಕ್ 7.70 ಬ್ಯಾಂಕ್‌ಗಳು ಶೇಕಡ ಸಾಲ ಯೋಜನೆಯ ಪಾಲನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
2023-2024 ಸಾಲಿನ ಸಾಮರ್ಥ್ಯ ಆಧಾರಿತ ಜಿಲ್ಲಾ ಸಾಲ ಯೋಜನೆಯನ್ನು ನಬಾರ್ಡ್ ಜಿಲ್ಲೆಗೆ 12,465 ಕೋಟಿ ರೂ. ಸಾಲ ಸಾಮರ್ಥ್ಯ ಗುರುತಿಸಿದ್ದು, ಅದಕ್ಕೆ ಅನುಗುಣವಾಗಿ ಜಿಲ್ಲೆಯ ಬ್ಯಾಂಕುಗಳು ಆದ್ಯತಾ ವಲಯಕ್ಕೆ 12,138 ಕೋಟಿ ರೂ. ಯೋಜನೆ ತಯಾರಿಸಿವೆ. ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್ 3946 ಕೋಟಿ ರೂ. ಯೋಜನೆ ತಯಾರಿಸಿದ್ದು ಇತರ ಎಲ್ಲಾ ಆರ್ಥಿಕ ಸಂಸ್ಥೆಗಳಿಗಿಂತ ಮೊದಲನೇ ಸ್ಥಾನದಲ್ಲಿದೆ, ಹಾಸನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1553 ಕೋಟಿ ರೂ. ಸಾಲ ಯೋಜನೆ ತಯಾರಿಸಿದ್ದು, ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಹೋಟೆಲ್ ಹಾಗೂ ಮತ್ತಿತರರ ವ್ಯಾಪಾರಗಳಿಗೆ 495.97 ಕೋಟಿ ರೂ.ಗಳನ್ನು ಯೋಜನೆಯಲ್ಲಿ ಇರಿಸಲಾಗಿದೆ. 2023-2024 ಸಾಲಿನಲ್ಲಿ ಕೃಷಿಯಲ್ಲಿ ಬೆಳೆ ಸಾಲಕ್ಕೆ 5,264.11 ಕೋಟಿ ರೂ. ಹಾಗೂ ಮಧ್ಯಮ ಮತ್ತು ದೀರ್ಘಾವಧಿ ಸಾಲಕ್ಕೆ 3161.96 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ರೇವತಿ ಸುಧಾಕರ್ ಅವರು ಮಾತನಾಡಿ, ಸಾಲ ಯೋಜನೆಯಿಂದ ನೀರಾವರಿ ಪಂಪುಗಳಿಗೆ ಶೀಘ್ರವಾಗಿ ಹಾಗೂ ಸುಲಭದಲ್ಲಿ ವಿದ್ಯುತ್ ಸಂಪರ್ಕ, ರೈತರಿಗೆ ಸುಲಭವಾಗಿ ಹಾಗೂ ಸಕಾಲದಲ್ಲಿ ಬೀಜ, ರಸಗೊಬ್ಬರ ಹಾಗೂ ಕೀಟ ನಾಶಕ ಪೂರೈಕೆ, ರೈತರಿಗೆ ನೂತನ ತಂತ್ರಜ್ಞಾನ ಯಾಂತ್ರಿಕ ಮಾಹಿತಿ ಸುಲಭವಾಗಿ ತಲುಪವಂತೆ ಮಾಡುವುದು, ಹಾಲಿನ ಸೊಸೈಟಿ ಅಭಿವೃದ್ಧಿಪಡಿಸುವುದು, ರೈತರು ಹಾಕಿದ ಹಾಲಿನ ಹಣದಲ್ಲಿ ಸಾಲ ವಸೂಲಾತಿಗೆ ಕ್ರಮ ಕೈಗೊಳ್ಳುವುದು ಉಳಿದ ಕ್ಷೇತ್ರಗಳಲ್ಲಿಯೂ ಹಾಲಿನ ಡೈರಿ ಕೇಂದ್ರಗಳನ್ನು ತೆರೆಯುವುದಕ್ಕೆ ಸಹಾಯವಾಗಲಿದೆ ಎಂದರು.
ಉತ್ತಮ ತಳಿಯ ಜಾನುವಾರು ಜಿಲ್ಲೆಯಲ್ಲಿ ಸಿಗುವಂತೆ ಕ್ರಮ ಕೈಗೊಳ್ಳುವುದು, ಸ್ವಯಂ ಉದ್ಯೋಗ ಯೋಜನೆಗಳು ಹಾಗೂ ಇತರ ಪ್ರಾಯೋಜಿತ ಕಾರ್ಯಕ್ರಮಗಳ ಮೂಲಕ ವಿತರಿಸುತ್ತಿರುವ ಸಾಲಗಳಲ್ಲಿ ಸರಿಯಾದ ಮರುಪಾವತಿ ಆಗದೇ ಇರುವುದು ಹಾಗೂ ಹೆಚ್ಚುತ್ತಿರುವ ಸುಸ್ತಿ ಬಾಕಿ ಪ್ರಕರಣಗಳನ್ನು ಆತಂಕಕಾರಿ ಬೆಳವಣಿಗೆಗಳಾಗಿವೆ. ಈ ಎಲ್ಲಾ ಯೋಜನೆಗಳಲ್ಲಿ ಮರುಪಾವತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದು ಹಾಗೂ ಪ್ರತ್ಯೇಕ ವಸೂಲಿಗೆ ಕ್ರಮ ರೂಪಿಸುವುದು ಹಾಗೂ ಸ್ವ ಸಹಾಯ ಸಂಘಗಳು ತಯಾರಿಸಿದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ದೊರಕಿಸಿಕೊಡುವುದಾಗಿದೆ ಎಂದು ಅವರು ತಿಳಿಸಿದರು.
ಬ್ಯಾಂಕುಗಳು ಗ್ರಾಹಕರಿಗೆ ಜನಧನ ಯೋಜನೆಯ ಮೂಲಕ ಜಿರೋ ಬ್ಯಾಲೆನ್ಸ್ ಖಾತೆ ತೆರೆಯುತ್ತಿದ್ದಾರೆ. ಪ್ರತಿಯೊಂದು ಕುಟುಂಬವೂ ಕನಿಷ್ಠ ಒಂದು ಖಾತೆ ಹೊಂದಿವೆ. ಜೊತೆಗೆ ಪ್ರಧಾನ ಮಂತ್ರಿಗಳ ಸಾಮಾಜಿಕ ಭದ್ರತಾ ಯೋಜನೆಗಳಾದ ಜನ ಸುರಕ್ಷಾ, ಜೀವನ ಜ್ಯೋತಿ ಹಾಗೂ ಅಟಲ್ ಪೆನ್ಷನ್ ವಿಮಾ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಎಲ್ಲಾ ಸೌಲಭ್ಯಗಳ ಮಾಹಿತಿ ಮತ್ತು ಕುಂದುಕೊರತೆಗಳ ವಿಚಾರಣೆಗೆ ಜಿಲ್ಲೆಯ 8 ತಾಲ್ಲೂಕು ಕೇಂದ್ರಗಳಲ್ಲಿ ಆರ್ಥಿಕ ಸಾಕ್ಷಾರತಾ ಕೇಂದ್ರ ತೆರೆದಿದ್ದು 1210 ಸಭೆಗಳನ್ನು ನಡೆಸಿ 78186 ಗ್ರಾಹಕರಿಗೆ ಆರ್ಥಿಕ ಸಾಕ್ಷರತೆ ನಿಡಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್ ಪೂರ್ಣಿಮಾ, ನಬಾರ್ಡ್ ಡಿಡಿ ಎಂ. ಮಾಲಿನಿ ಸುವರ್ಣಾ, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೆಶಕರಾದ ಸಿದ್ದರಾಜು, ಬ್ಯಾಂಕ್ ಆಫ್ ಬರೋಡಾ ಹಿರಿಯ ಪ್ರಬಂಧಕರಾದ ಡಿ. ಅಂಜಲಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಪ್ರಬಂಧಕರಾದ ಕಿಶೋರ್ ಉತ್ಕಲ್ ಹಾಗೂ ಮತ್ತಿತರರು ಹಾಜರಿದ್ದರು.