

ಹಾಸನ: ಹಾಸನ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿದ ಮತದಾರರಿಗೆ ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟ ಧನ್ಯವಾದಗಳನ್ನು ಸಲ್ಲಿಸುತ್ತದೆ. ಹಾಗೂ ಹಾಸನದ ಸಂಸದರಾಗಿ ಆಯ್ಕೆಯಾಗಿರುವ ಶ್ರೇಯಸ್ ಪಟೇಲ್ ಅವರಿಗೆ ಅಬಿನಂಧನೆಗಳನ್ನು ತಿಳಿಸುವುದಾಗಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 31 ರಂದು ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ ಸಮಾನ ಮನಸ್ಕರ ಸಮಾಲೋಚನಾ ಸಭೆ ನಡೆಸಿ ಬಿಜೆಪಿ - ಜೆಡಿಎಸ್ ಸೋಲಿಸಿ; ಹಾಸನ ಉಳಿಸಿ ಎಂಬ ಅಭಿಯಾನವನ್ನು ಆರಂಭಿಸಲಾಗಿತ್ತು. ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ನಗರ, ಗ್ರಾಮಾಂತರ ಮಟ್ಟದಲ್ಲಿ ಅಭಿಯಾನ ನಡೆಸಲಾಗಿತ್ತು. ಕ್ಷೇತ್ರದಾದ್ಯಂತ ನಮ್ಮ ತಂಡ ಸಂಚರಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿತ್ತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಅಭಿಯಾನದಲ್ಲಿ ನರೇಂದ್ರ ಮೋದಿಯ ಬಿಜೆಪಿ ಸರ್ಕಾರದ ಜನವಿರೋಧಿ ಮತ್ತು ಸಂವಿಧಾನ ವಿರೋಧಿ ದುರಾಡಳಿತ ಹಾಗೂ ಕೇವಲ ಒಂದೇ ಕುಟುಂಬದ ಸ್ವಾರ್ಥಕ್ಕಾಗಿ ಜೆಡಿಎಸ್ ನಡೆಸಿದ ಅವಕಾಶವಾದಿ ರಾಜಕಾರಣ ಮತ್ತು ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಶೂನ್ಯ ಕೆಲಸದ ಕುರಿತು ಹಾಸನ ಲೋಕಸಭಾ ಕ್ಷೇತ್ರದ ಜನರಿಗೆ ಕರಪತ್ರ, ಸಭೆ, ಭಾಷಣ, ಚರ್ಚೆ ಮತ್ತು ಬೀದಿ ನಾಟಕದ ಮುಖಾಂತರ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಲಾಯಿತು. ನಮ್ಮ ಒಕ್ಕೂಟ ಸ್ವತಂತ್ರವಾಗಿ ನಡೆಸಿದ ಈ ಮಹತ್ವದ ಪ್ರಯತ್ನಕ್ಕೆ ಮತದಾರರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮತದಾರರು ಜಿಲ್ಲೆಯಲ್ಲಿನ ಒಂದೇ ಕುಟುಂಬದ ದುರಾಡಳಿತದ ವಿರುದ್ಧ ಮತಚಲಾಯಿಸಿ ಹಾಸನದ ಗೌರವವನ್ನು ಎತ್ತಿಹಿಡಿದ ಕಾರಣಕ್ಕೆ ನಮ್ಮ ಒಕ್ಕೂಟದ ಪರವಾಗಿ ಜನರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ ಎಂದರು.
ಈ ಚುನಾವಣೆಯಲ್ಲಿ ಸೋತವರಿಗೂ ಮತ್ತು ಗೆದ್ದವರಿಗೂ ಇಬ್ಬರಿಗೂ ಕಲಿಯುವ ಪಾಠವಿದೆ. ಪಾಳೆಗಾರಿಕೆ, ಜಾತಿವಾದಿ ಮತ್ತು ದುರಂಹಕಾರದ ಆಡಳಿತವನ್ನು ಜನರು ಹೆಚ್ಚು ಕಾಲ ಸಹಿಸುವುದಿಲ್ಲ ಎನ್ನುವ ಸಂದೇಶವನ್ನು ಜನರು ಈ ಚುನಾವಣೆಯ ಮೂಲಕ ನೀಡಿದ್ದಾರೆ. ನೂತನವಾಗಿ ಹಾಸನದ ಸಂಸದರಾಗಿ ಆಯ್ಕೆಯಾಗಿರುವ ಶ್ರೇಯಶ್ ಪಟೇಲ್ ಅವರು ಈ ಚುನಾವಣೆಯಲ್ಲಿ ಜನರು ನೀಡಿರುವ ಸ್ಪಷ್ಟ ಸಂದೇಶವನ್ನು ಅರ್ಥಮಾಡಿಕೊಂಡು, ಸದಾ ಜನರೊಂದಿಗೆ ಇದ್ದುಕೊಂಡು ಜನಪರವಾಗಿ ಕೆಲಸ ಮಾಡುತ್ತಾ, ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ರಾಜಶೇಖರ್, ಅಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶೀರ್ ಅಹಮದ್, ಎಚ್.ಕೆ. ಸಂದೇಶ್, ಅಬ್ದುಲ್ ಸಮಾದ್, ರಾಜು ಗೊರೂರು, ಇರ್ಷಾದ್ ಇತರರು ಉಪಸ್ಥಿತರಿದ್ದರು.