

ಹಾಸನ: ಕಳೆದ ಒಂದು ತಿಂಗಳಿನಿಂದ ಅಭ್ಯರ್ಥಿಗಳು ಮತದಾರರನ್ನು ಓಲೈಸಲು ನಾ ಮುಂದು ತಾ ಮುಂದು ಎಂದು ಕಸರತ್ತುಗಳನ್ನು ಮಾಡಿದ್ದರು. ನಾಳೆ ಆ ಎಲ್ಲಾ ಅಭ್ಯರ್ಥಿಗಳ ಹಣೆಬರಹ ಬರೆಯಲು ಮತದಾರ ಪ್ರಭುಗಳು ಮತದಾನಕ್ಕೆ ಸಜ್ಜಾಗಿದ್ದಾರೆ. ಮತದಾನ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ಮಂಗಳವಾರ ಬೆಳಗ್ಗೆಯಿಂದ ನಗರದ ಸರ್ಕಾರಿ ಕಲಾ ಕಾಲೇಜಿನ ಆವರಣದಲ್ಲಿ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಸ್ಟರಿಂಗ್ ಕಾರ್ಯ ಆರಂಭವಾಗಿ ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿ ಹಾಜರಾತಿ ಪಡೆದುಕೊಳ್ಳಲಾಯಿತು. ಬೆಳಗ್ಗೆಯೇ ಚುನಾವಣಾ ಕರ್ತವ್ಯಕ್ಕೆ ಬಂದ ಅಧಿಕಾರಿಗಳಿಗೆ ಕಲಾ ಕಾಲೇಜು ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ನಂತರ ಅಧಿಕಾರಿಗಳು ತಮಗೆ ನಿಯೋಜನೆಯಾಗಿರುವ ಮತಗಟ್ಟೆಗಳಿಗೆ ಪೊಲೀಸರ ತಂಡದೊಂದಿಗೆ ವಾಹನಗಳ ಮೂಲಕ ಮತಯಂತ್ರದೊಂದಿಗೆ ತೆರಳಿದರು.
ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ವಿದ್ಯುನ್ಮಾನ ಮತಯಂತ್ರವನ್ನು ಶೇಖರಿಸಿಟ್ಟಿರುವ ಸ್ಟ್ರಾಂಗ್ ರೂಂನ ಬಾಗಿಲನ್ನು ಎಲ್ಲರ ಸಮ್ಮುಖದಲ್ಲಿ ತೆರೆಯಲಾಯಿತು. ಬಳಿಕ ಅವುಗಳನ್ನು ಪರಿಶೀಲಿಸಿ ನಂತರ ಸಿಬ್ಬಂದಿಗೆ ವಿತರಿಸಲಾಯಿತು. ಮತಯಂತ್ರವನ್ನು ಹಿಡಿದುಕೊಂಡು ಅಧಿಕಾರಿಗಳು ತಮ್ಮ ತಮ್ಮ ಮತಗಟ್ಟೆಯ ಕಡೆಗೆ ಪಯಣ ಬೆಳೆಸಿದರು.
ಪ್ರತಿ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 6-9 ಫ್ಲೈಯಿಂಗ್ ಸ್ಕ್ವಾಡ್ ನೇಮಿಸಲಾಗಿದೆ. ಜಿಲ್ಲೆಯಲ್ಲಿ 83 ತಂಡಗಳು, ದಿನದ 24 ಗಂಟೆಯೂ ಕೆಲಸ ನಿರ್ವಹಿಸಲಿವೆ. ಕಾನೂನು ಸುವ್ಯವಸ್ಥೆ ಕಾಪಾಡಲು 23 ಸಿಎಪಿಎಫ್ ತುಕಡಿಗಳು ಬಂದಿವೆ. ಏಳೂ ಕ್ಷೇತ್ರಗಳಿಗೂ ತಲಾ ಒಂದರಂತೆ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ನಮ್ಮ ಜಿಲ್ಲೆಯ ಜಿಲ್ಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆಗೆ ಹೊರಗಿನಿಂದ 1700 ಸಿಬ್ಬಂದಿ ಕರೆಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 33 ಚೆಕ್‌ಪೋಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿವೆ.
ಚುನಾವಣೆಗೆ 904 ವಾಹನಗಳ ಬಳಕೆ
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ಮತಪೆಟ್ಟಿಗೆ ತೆಗೆದುಕೊಂಡು ಹೋಗಲು ಮತ್ತು ಭದ್ರತೆ ಸೇರಿದಂತೆ ಇನ್ನಿತರೆ ಕೆಲಸಗಳಿಗೆ ಒಟ್ಟು 904 ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇವುಗಳಲ್ಲಿ 299 ಸರ್ಕಾರಿ ಬಸ್‌ಗಳು, 303 ಜೀಪುಗಳು, 90 ಮ್ಯಾಕ್ಸಿಕ್ಯಾಬ್‌ಗಳು, 209 ಕಾರು ಮತ್ತು ಜೀಪುಗಳು ಮತ್ತು 43 ಮ್ಯಾಕ್ಸಿಕ್ಯಾಬ್‌ಗಳನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲಾಗಿದೆ.