

ಹಾಸನ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮತ್ತೊಬ್ಬ ಸೊಸೆ ಕಣಕ್ಕಿಳಿಯುವುದು ಬಹುತೇಕ ಖಚಿತ ಆದಂತಾಗಿದೆ. ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಅವರ ಪತ್ನಿ, ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಅವರು ಸೋಮವಾರ ಹಾಸನ ತಾಲೂಕು ಸಾಲಗಾಮೆ ಹೋಬಳಿ ಕಕ್ಕೆಹಳ್ಳಿ ಗ್ರಾಮದಲ್ಲಿ ನಡೆದ ಅಣ್ಣಪ್ಪಸ್ವಾಮಿ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ‘ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿ ನನ್ನನ್ನೇ ಕಣಕ್ಕಿಳಿಸಲು ಪಕ್ಷದ ವರಿಷ್ಟರು ತೀರ್ಮಾನ ಮಾಡಿದ್ದಾರೆ. ಶೀಘ್ರದಲ್ಲೇ ಆ ಕುರಿತ ಪ್ರಕಟಣೆ ಹೊರಬೀಳಲಿದೆ’ ಎಂಬುದಾಗಿ ಹೇಳಿರುವ ವಿಡಿಯೊ ತುಣುಕು ಮಂಗಳವಾರ ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭವಾನಿ ಅವರು ಹಾಸನ ಕ್ಷೇತ್ರದಿಂದ ಕಣಕ್ಕಿಳಿಯುವುದು ಪಕ್ಷದ ನಿರ್ಧಾರವೋ ಅಥವಾ ಭವಾನಿ ಅವರ ಸ್ವಯಂ ನಿರ್ಧಾರವೋ ಖಚಿತವಾಗಿಲ್ಲ. ಆದರೆ ಹಾಸನ ಕ್ಷೇತ್ರಕ್ಕೆ ಭವಾನಿ ರೇವಣ್ಣ ಅವರೇ ಜೆಡಿಎಸ್ ಅಭ್ಯರ್ಥಿ ಆಗುತ್ತಾರೆ ಎಂಬ ಊಹಾಪೋಹಗಳಿಗೆ ತೆರೆಬೀಳುವ ಸಂದರ್ಭ ಬಂದಿರುವುದಂತೂ ನಿಜ.
ಈ ವಿಡಿಯೊ ವೈರಲ್ ಆದ ನಂತರ ಮಂಗಳವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಹಾಸನ ಕ್ಷೇತ್ರ ಜೆಡಿಎಸ್ ಟಿಕೆಟ್‌ನ ಮತ್ತೊಬ್ಬ ಆಕಾಂಕ್ಷಿ ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಅವರು, ‘ಹಾಸನ ಜಿಲ್ಲೆಯ 7 ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳ ಟಿಕೆಟ್ ಯಾರಿಗೆ ಎಂಬುದು ಖಚಿತವಾಗಿದೆ. ಉಳಿದ ಮೂರು ಕ್ಷೇತ್ರಗಳಲ್ಲಿ ಗೊಂದಲ ಮುಂದುವರಿದಿದೆ. ಶ್ರವಣಬೆಳಗೊಳ, ಸಕಲೇಶಪುರ, ಬೇಲೂರು ಮತ್ತು ಹೊಳೆನರಸೀಪುರ ಕ್ಷೇತ್ರಗಳಲ್ಲಿ ಹಾಲಿ ಶಾಸಕರೇ ಕಣಕ್ಕಿಳಿಯಲಿದ್ದಾರೆ. ಉಳಿದ ಅರಸೀಕೆರೆ, ಅರಕಲಗೂಡು ಮತ್ತು ಹಾಸನ ಕ್ಷೇತ್ರಗಳಲ್ಲಿ ಗೊಂದಲ ಇರುವ ಕಾರಣ ಇನ್ನೂ ತೀರ್ಮಾನ ಆಗಿಲ್ಲ’ ಎಂದು ಹೇಳುವ ಮೂಲಕ ಭವಾನಿ ರೇವಣ್ಣ ಅವರ ಹೇಳಿಕೆಯನ್ನು ಪರೋಕ್ಷವಾಗಿ ವಿರೋಧಿಸಿದರು.
ತಾವು ಸಹ ಕ್ಷೇತ್ರದ ಹಳ್ಳಿಗಳಲ್ಲಿ ಸಂಚರಿಸಿ ಜನರ ಕಷ್ಟ ಸುಖ ವಿಚಾರಿಸುವ ಕೆಲಸ ಮಾಡುತ್ತಿದ್ದು, ತಮ್ಮ ತಂದೆ ದಿವಂಗತ ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದಾರೆ. ತಮ್ಮ ಪರ ಮತದಾರರ ಒಲವು ಇರುವ ಕುರಿತು ಪಕ್ಷದ ವರಿಷ್ಟರಿಗೂ ತಿಳಿದಿದೆ. ಹಾಗಾಗಿ ತಮಗೇ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ನುಡಿದರು. ಆದರೆ ಪಕ್ಷದ ನಿರ್ಧಾರಕ್ಕೆ ಬದ್ಧ, ಯಾರಿಗೇ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಪಕ್ಷ ತೊರೆಯುವ ಮಾತೇ ಇಲ್ಲ ಎಂಬ ಮಾತನ್ನೂ ಸೇರಿಸಿದರು.
ಹದಿನಾಲ್ಕು ವರ್ಷಗಳ ಹೋರಾಟ ಅಂತಿಮ ಹಂತಕ್ಕೆ:
‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದ ಯಾವುದೇ ಮಹಿಳೆ ಸ್ಪರ್ಧಿಸುವುದಿಲ್ಲ’ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಹಿರಂಗವಾಗಿ ಘೋಷಿಸಿದ್ದರೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲೇಬೇಕೆಂಬ ಭವಾನಿ ರೇವಣ್ಣ ಅವರ ಪ್ರಯತ್ನ ಮಾತ್ರ ನಿಂತಿಲ್ಲ. ತಮ್ಮ ಓರಗಿತ್ತಿ (ಎಚ್.ಡಿ. ಕುಮಾರಸ್ವಾಮಿ ಪತ್ನಿ ಅನಿತಾ) 2008 ರಲ್ಲಿ ತುಮಕೂರು ಜಿಲ್ಲೆ ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಶಾಸಕಿ ಆದಾಗಿನಿಂದಲೂ ತಾವೂ ಶಾಸಕಿ ಆಗಬೇಕು ಎಂಬ ಹಠದಿಂದ ಮೊದಲಿಗೆ ಮೈಸೂರು ಜಿಲ್ಲೆ ಕೆ.ಆರ್. ನಗರದಲ್ಲಿ ನಂತರ ಹಾಸನ ಜಿಲ್ಲೆ ಬೇಲೂರು ಕ್ಷೇತ್ರದಿಂದ ಸ್ಪರ್ಧಿಸಲು ನಡೆಸಿದ ಪ್ರಯತ್ನ ವಿಫಲವಾಗಿದ್ದವು. ಆದರೂ ಛಲ ಬಿಡದ ಭವಾನಿ ಅವರು ಈ ಬಾರಿ ಹಾಸನ ಕ್ಷೇತ್ರದಿಂದ ಕಣಕ್ಕಿಳಿಯಲೇಬೇಕೆಂಬ ಜಿದ್ದಿಗೆ ಬಿದ್ದಂತೆ ಕಾಣುತ್ತಿದೆ. ಆದ್ದರಿಂದಲೇ ಪಕ್ಷದ ವರಿಷ್ಟರ ತೀರ್ಮಾನಕ್ಕೂ ಕಾಯದೆ ತಾವೇ ಅಭ್ಯರ್ಥಿ ಎಂಬುದಾಗಿ ಘೋಷಿಸಿಕೊಂಡಿದ್ದಾರೆ. ಭವಾನಿ ಅವರ ತೀರ್ಮಾನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದರೆ ಎಚ್.ಡಿ. ರೇವಣ್ಣ ಕುಟುಂಬ ಮುಖಭಂಗ ಎದುರಿಸಬೇಕಾಗುತ್ತದೆ. ಪಕ್ಷದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶದಿಂದಲೇ ಭವಾನಿ ಅವರು ಬಹಿರಂಗ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ವೇದಿಕೆ ಸಜ್ಜು:
ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡಲು ಇಷ್ಟವಿಲ್ಲದಿರುವ ಕಾರಣ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹಾಸನದ ದಿವಂಗತ ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಅವರ ಪುತ್ರ, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಪರ ಒಲವು ಹೊಂದಿದ್ದಾರೆ. ಜೆಡಿಎಸ್ ಪಾಲಿಗೆ ಜಿಲ್ಲೆಯ ಪ್ರಶ್ನಾತೀತ ನಾಯಕರಾಗಿರುವ ಎಚ್.ಡಿ. ರೇವಣ್ಣ ಅವರ ಕುಟುಂಬವನ್ನು ದೂರ ಇಟ್ಟು ಎಚ್.ಪಿ. ಸ್ವರೂಪ್ ಅವರು ತಮ್ಮ ತಂದೆಯ ಹುಟ್ಟು ಹಬ್ಬದ ಅದ್ಧೂರಿ ಆಚರಣೆ ಮಾಡಿದ ಸಂದರ್ಭದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭಾಗವಹಿಸಿ ಬೆನ್ನುತಟ್ಟಿ ಹೋಗಿದ್ದರು.
ಆದರೆ ಈ ಯಾವ ಬೆಳವಣಿಗೆಗಳಿಂದಲೂ ವಿಚಲಿತರಾಗದ ಭವಾನಿ ರೇವಣ್ಣ ಅವರು ಹಾಸನದಲ್ಲಿ ಅಭ್ಯರ್ಥಿ ಆಗುವ ತಮ್ಮ ಪ್ರಯತ್ನ ಮುಂದುವರಿಸಿದ್ದರು. ಜೊತೆ ತಮ್ಮ ಪುತ್ರರಾದ ಸಂಸದ ಪ್ರಜ್ವಲ್ ಮತ್ತು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ಅವರನ್ನು ಹಾಸನ ಕ್ಷೇತ್ರದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿ ಪರೋಕ್ಷವಾಗಿ ತಮ್ಮ ಹೆಸರು ಹೆಚ್ಚು ಪ್ರಚಾರಕ್ಕೆ ಬರುವಂತೆ ನೋಡಿಕೊಂಡಿದ್ದರು. ‘ಹಾಸನದ ಬಿಜೆಪಿ ಶಾಸಕ ಪ್ರೀತಮ್ ಗೌಡ ತಮ್ಮ ಕುಟುಂಬ ವಿರುದ್ಧ ಸವಾಲು ಹಾಕಿದ್ದಾರೆ. ಅವರ ಸವಾಲನ್ನು ಸ್ವೀಕರಿಸಿದ್ದೇವೆ’ ಎಂದು ಹೇಳುವ ಮೂಲಕ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ತಾಯಿಯೇ ಅಭ್ಯರ್ಥಿ ಆಗುತ್ತಾರೆ ಎಂಬ ಸುಳಿವನ್ನು ನೀಡಿದ್ದರು.
ಸಂಧಾನ ಯತ್ನ:
ಶತಾಯಗತಾಯ ಹಾಸನ ಕ್ಷೇತ್ರದಲ್ಲಿ ಕಣಕ್ಕಿಳಿಯಲು ನಿರ್ಧರಿಸಿರುವ ಭವಾನಿ ಅವರ ಟಿಕೆಟ್‌ಗೆ ಅಡ್ಡಿಯಾಗಿರುವುದು ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್. ಆದ್ದರಿಂದ ಸ್ವರೂಪ್ ಅವರನ್ನೂ ತಮ್ಮ ಪರ ತಿರುಗಿಸಿಕೊಳ್ಳಲು ಇತ್ತೀಚೆಗೆ ಗುಟ್ಟಾಗಿ ಅವರನ್ನು ಹರದನಹಳ್ಳಿಯ ತೋಟದ ಮನೆಗೆ ಕರೆಸಿಕೊಂಡು ಭವಾನಿ ರೇವಣ್ಣ ಮತ್ತು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ಅವರು ಸ್ವರೂಪ್ ಮನವೊಲಿಸುವ ಪ್ರಯತ್ನ ನಡೆಸಿದರು ಎಂದು ತಿಳಿದು ಬಂದಿದೆ. ‘ಇದೊಂದು ಬಾರಿ ನಮಗೆ ಬಿಟ್ಟುಕೊಡು, ನಮ್ಮ ಕುಟುಂಬದ ವಿರುದ್ಧ ಸವಾಲು ಹಾಕಿರುವ ಪ್ರೀತಮ್‌ಗೌಡಗೆ ಬುದ್ಧಿ ಕಲಿಸಬೇಕಿದೆ. ನಿನಗೆ ಎಷ್ಟೇ ಸಾಲ ಇದ್ದರೂ ನಾವು ತೀರಿಸುತ್ತೇವೆ, ನಾವು ಮಾಡುವ ಹೊಸ ವ್ಯವಹಾರಗಳಲ್ಲೂ ನಿನಗೆ ಪಾಲು ಕೊಡುತ್ತೇವೆ’ ಎಂಬುದಾಗಿ ತಾಯಿ ಮತ್ತು ಮಗ ಸ್ವರೂಪ್ ಅವರ ಮೇಲೆ ಒತ್ತಡ ಹೇರಿದರು ಎನ್ನಲಾಗಿದೆ.
ಆದರೆ ಇದಕ್ಕೆ ಸುಲಭವಾಗಿ ಮಣಿಯದ ಸ್ವರೂಪ್, ‘ನನ್ನ ತಂದೆಯನ್ನು ಸೋಲಿಸಿದವನನ್ನು ಸೋಲಿಸಬೇಕು ಎಂಬ ಆಸೆ ನನಗೂ ಇದೆ. ಕಾರ್ಯಕರ್ತರೂ ಅದನ್ನೇ ಹೇಳುತ್ತಿದ್ದಾರೆ. ಪಕ್ಷದ ಹೈಕಮಾಂಡ್ ಏನು ಹೇಳುತ್ತದೆ ಅದಕ್ಕೆ ನಾನು ಬದ್ಧವಾಗಿರುತ್ತೇನೆ’ ಎಂದು ಹೇಳುವ ಮೂಲಕ ಭವಾನಿ ಅವರ ಕಾಲಿಗೆ ಬಿದ್ದು ಹೊರಬಂದರು ಎಂದು ಮೂಲಗಳೂ ತಿಳಿಸಿವೆ.
ಅದೇನೇ ಇದ್ದರೂ ಈಗ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಪೈಪೋಟಿ ಕ್ಲೈಮಾಕ್ಸ್ ಹಂತಕ್ಕೆ ಬಂದಿದ್ದು, ಚಂಡು ಹೈಕಮಾಂಡ್ ಅಂಗಳದಲ್ಲಿದೆ.
‘‘ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಹಾಸನ ಕ್ಷೇತ್ರ ಜೆಡಿಎಸ್ ಕೈತಪ್ಪಿ ಹೋಗಿದೆ. ಹಾಗಾಗಿ ಹಳ್ಳಿಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಹಿಂದೆ ರೇವಣ್ಣ ಅವರು ಮಂತ್ರಿ ಆಗಿದ್ದಾಗ ಹಾಸನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಬಾರಿ ಈ ಕ್ಷೇತ್ರದಲ್ಲೂ ಜಯಸಾಧಿಸಬೇಕು ಎಂಬ ಉದ್ದೇಶದಿಂದ ಪಕ್ಷದ ನಾಯಕರು ನನ್ನನ್ನು ಅಭ್ಯರ್ಥಿ ಅಗಿಸಲು ನಿರ್ಧಾರ ಮಾಡಿದ್ದಾರೆ.’’
ಭವಾನಿ ರೇವಣ್ಣ, ಜಿಪಂ ಮಾಜಿ ಸದಸ್ಯೆ.
‘‘ನಮ್ಮ ತಂದೆ ಎಚ್.ಎಸ್. ಪ್ರಕಾಶ್ ಶಾಸಕರಾಗಿದ್ದ ಕಾಲದಿಂದಲೂ ನಾನು ಅವರೊಂದಿಗೆ ಕ್ಷೇತ್ರದಲ್ಲಿ ಓಡಾಡಿ ಕೆಲಸ ಮಾಡಿದ್ದೇನೆ. ಅವರ ನಿಧನದ ನಂತರವೂ ನಮ್ಮ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ಅವರ ಸೂಚನೆಯಂತೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಜನರಿಗೂ ನನ್ನ ಪರ ಒಲವು ಇದೆ. ಭವಾನಿ ಅಕ್ಕನವರ ಹೇಳಿಕೆಯಿಂದ ಕಾರ್ಯಕರ್ತರಲ್ಲಿ ಸ್ವಲ್ಪ ಗೊಂದಲ ಆಗಿರುವುದು ನಿಜ. ಪಕ್ಷದ ಹೈಕಮಾಂಡ್ ಈ ಕುರಿತ ನಿರ್ಧಾರವನ್ನು ಶೀಘ್ರ ಪ್ರಕಟಿಸಲಿದೆ.’’
ಎಚ್.ಪಿ. ಸ್ವರೂಪ್, ಜಿಪಂ ಮಾಜಿ ಉಪಾಧ್ಯಕ್ಷ.