

ಹಾಸನ: ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಮಳೆಹಾನಿ ಕುರಿತಂತೆ ಚರ್ಚಿಸಲು ಕರೆಯಲಾಗಿದ್ದ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಕುರಿತಂತೆ ದೊಡ್ಡ ಹೈಡ್ರಾಮ ನಡೆಯಿತು. ದಿವಂಗತ ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಅವರ ಪುತ್ರ, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಅವರಿಗೇ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಘೋಷಣೆ ಮಾಡುವಂತೆ ಜೆಡಿಎಸ್ ಕಾರ್ಯಕರ್ತರು ಮತ್ತು ಸ್ವರೂಪ್ ಬೆಂಬಲಿಗರು ಆಗ್ರಹಿಸಿದ್ದರಿಂದ ಸಭೆಯಲ್ಲಿ ಗೊಂದಲ ಸೃಷ್ಟಿಯಾಯಿತು.
ಸಭೆಯ ಆರಂಭದಲ್ಲೇ ಮಾತನಾಡಿದ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ, ಸಭೆ ಕರೆದಿರುವುದು ಟಿಕೆಟ್ ಘೋಷಣೆ ಮಾಡುವುದಕ್ಕಲ್ಲ. ಕಾರ್ಯಕರ್ತರ ಅಹವಾಲು ಹಾಗೂ ಸಮಸ್ಯೆಗಳ ಚರ್ಚೆಗೆ ಎಂದು ಹೇಳಿದಾಗ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಹಾಸನ ಕ್ಷೇತ್ರದ ಟಿಕೆಟ್ ಘೋಷಿಸುವಂತೆ ಕಾರ್ಯಕರ್ತರು ಪಟ್ಟು ಹಿಡಿದರು. ಆದರೂ ಒಂದಿಬ್ಬರು ಪಕ್ಷದ ಮುಖಂಡರು ಸಭೆಯಲ್ಲಿ ಮಾತನಾಡುವವರೆಗೂ ಸಭೆ ಶಾಂತವಾಗಿ ನಡೆಯಿತು. ನಂತರ ಪ್ರತಿಯೊಬ್ಬರು ನೆರೆ, ಬೆಳೆ ನಷ್ಟ ಮುಂತಾದ ಸಮಸ್ಯೆಗಳ ಬಗೆಗೆ ಮಾತನಾಡಿದ್ದು, ಕಾರ್ಯಕರ್ತರ ತಾಳ್ಮೆ ಕಟ್ಟೆ ಒಡೆಯುವಂತಾಯಿತು.
ಸಭೆ ಮಧ್ಯೆ ಎದ್ದು ನಿಂತ ಕೆಲ ಕಾರ್ಯಕರ್ತರು, ಹಾಸನ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಸಮರ್ಥ ನಾಯಕತ್ವದ ಅವಶ್ಯಕತೆ ಇದೆ. ಹಾಗಾಗಿ ಈ ಕೂಡಲೇ ಪಕ್ಷದ ಟಿಕೆಟ್ ಯಾರಿಗೆ ಎಂಬುದನ್ನು ಘೋಷಣೆ ಮಾಡಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ಆಗ್ರಹಿಸಿದರು. ಇದರಿಂದ ಕೆರಳಿದ ರೇವಣ್ಣ, ಗಲಾಟೆ ಮಾಡುವುದಾದರೆ ಸಭೆಯಿಂದ ಆಚೆ ಹೋಗಿ ಎಂದು ಗದರಿದರು.
ಹೊರನಡೆದ ಕಾರ್ಯಕರ್ತರು:
ರೇವಣ್ಣ ಮಾತಿನಿಂದ ರೊಚ್ಚಿಗೆದ್ದ ನೂರಾರು ಕಾರ್ಯಕರ್ತರು ಮಾತಿಗಿಳಿದು ಸಭೆಯಲ್ಲಿ ಗದ್ದಲ ಎಬ್ಬಿಸಿದರು. ಈ ವೇಳೆ ಸ್ವರೂಪ್‌ಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಘೋಷಣೆ ಕೂಗಿದರು. ಕೆಲ ಕಾಲ ಸಭೆ ಗದ್ದಲದಿಂದ ತುಂಬಿ ಹೋಯಿತು. ಸ್ವರೂಪ್ ಮೈಕ್ ಹಿಡಿದು ಎಲ್ಲರನ್ನು ಸಮಾಧಾನಪಡಿಸಿ ಸಭೆ ಮುಂದುವರೆಯಲು ಅನುವು ಮಾಡಿದರು.
ಸ್ವರೂಪ್ ಸಭೆಯನ್ನುದ್ದೇಶಿಸಿ ಮಾತನಾಡಿ ಮುಗಿಸಿದ ಕ್ಷಣ ಮಾತ್ರದಲ್ಲಿ ಇಡೀ ಸಭಾಂಗಣದಲ್ಲಿದ್ದ ಶೇ.90ರಷ್ಟು ಕಾರ್ಯಕರ್ತರು ಸಭೆಯಿಂದ ಹೊರನಡೆದರು. ರೇವಣ್ಣ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾರ್ಯಕರ್ತರು ಪಕ್ಷದಲ್ಲಿ ಕುಟುಂಬ ರಾಜಕಾರಣ ಹೆಚ್ಚಾಗಿದೆ. ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಕುಟುಂಬ ಮೂರು ದಶಕಗಳಿಗೂ ಹೆಚ್ಚು ಕಾಲ ಎಚ್.ಡಿ. ದೇವೇಗೌಡರಿಗೆ ಹೆಗಲು ಕೊಟ್ಟಿದೆ. ಅಂತಹ ಕುಟುಂಬಕ್ಕೆ ಇಂದು ಅನ್ಯಾಯವಾಗುತ್ತಿದೆ. ಸ್ವರೂಪ್‌ಗೆ ಟಿಕೆಟ್ ಕೊಡದಿದ್ದರೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಉಳಿಗಾಲವಿಲ್ಲ ಎಂದು ನೇರವಾಗಿಯೇ ಅಸಮಾಧಾನ ಹೊರ ಹಾಕಿದರು.
ಕೈಮುಗಿದು ಸುಮ್ಮನಿರಿಸಿದ ಸ್ವರೂಪ್:
ಸಭೆಯಲ್ಲಿ ಏರ್ಪಟ್ಟ ಗದ್ದಲದಿಂದ ಒಂದು ಹಂತದಲ್ಲಿ ರೇವಣ್ಣ ಮಾತಿಗೆ ಕಾರ್ಯಕರ್ತರು ಕ್ಯಾರೆ ಎನ್ನದಿದ್ದಾಗ, ಸ್ವರೂಪ್ ಮೈಕ್ ಹಿಡಿದು ಕೈ ಮುಗಿದು ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಸಭೆಯಲ್ಲಿ ಹಿರಿಯರ ಮಾರ್ಗದರ್ಶನದಂತೆ ನಡೆಯೋಣ ಯಾರು ಕೂಡ ಗದ್ದಲ ಮಾಡಿ ಸಭೆಗೆ ಅಪಮಾನ ಮಾಡಬೇಡಿ ಎಂದು ಕೈಮುಗಿದು ಪ್ರಾರ್ಥಿಸಿದರು.
ಪ್ಲೆಕ್ಸ್ ಹರಿದ ಕಾರ್ಯಕರ್ತರು:
ಜೆಡಿಎಸ್ ಮುಖಂಡರೊಬ್ಬರು ಸಭೆ ನಡೆದ ಜಾಗದ ಆವರಣದಲ್ಲಿ ತಮ್ಮ ಭಾವಚಿತ್ರವಿರುವ ಪ್ಲೆಕ್ಸ್ ಅವಳಡಿಸಿದ್ದರು. ಸಭೆಗೂ ಮುನ್ನವೇ ಕೆಲ ಕಾರ್ಯಕರ್ತರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೇ, ಸಭಾಂಗಣ ಪ್ರವೇಶಿಸುತ್ತಿದ್ದ ರೇವಣ್ಣ ಗಮನಕ್ಕೆ ಈ ವಿಷಯ ತಂದರು. ಸಭೆಯಲ್ಲಿ ಏರ್ಪಟ್ಟ ಗದ್ದಲದಿಂದ ರೊಚ್ಚಿಗೆದ್ದ ಕಾರ್ಯಕರ್ತರು ಹೊರ ಬಂದ ಸಂದರ್ಭದಲ್ಲಿ ಸಭಾಂಗಣದ ಹೊರಗಿದ್ದ ಪ್ಲೆಕ್ಸ್ ಹರಿದು ಆಕ್ರೋಶ ಹೊರ ಹಾಕಿದರು.