

ಹಾಸನ: ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಕಳೆದ ಎರಡು ವರ್ಷಗಳಿಂದ ಹಾಸನ ಜಿಲ್ಲಾ ಕೋಟಾದಲ್ಲಿ ಹೊರಗಿನರಿಗೆ ನೀಡುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಸಮಾಧಾನ ವ್ಯಕ್ತಪಡಿಸಿದೆ.
ಈ ಸಂಬಂಧ ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್.ಎಲ್. ಮಲ್ಲೇಶಗೌಡ, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಪ್ರಕಟವಾದ ಕೂಡಲೇ ನಮ್ಮ ಜಿಲ್ಲೆಯ ಸಾಧಕರು ಯಾರಾದರು ಇದ್ದಾರಾ, ನಮ್ಮ ಜಿಲ್ಲೆಯವರಿಗೆ ಯಾರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂಬ ಕುತೂಹಲದಿಂದ ನೋಡಿದ ಜಿಲ್ಲೆಯ ಜನತೆಗೆ ನಿರಾಸೆ ಆಗಿದೆ ಎಂದಿದ್ದಾರೆ.
ಕಳೆದ ಬಾರಿಯಂತೆ ಈ ಬಾರಿಯೂ ಹಾಸನ ಜಿಲ್ಲೆಯ ಹೆಸರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯರಾದ ಅ.ರಾ. ಮಿತ್ರ ಅವರಿಗೆ ಪ್ರಶಸ್ತಿ ನೀಡಿರುವುದು ಅತ್ಯಂತ ವಿಷಾದನೀಯ ಸಂಗತಿ. ಅ.ರಾ.ಮಿತ್ರ ಅಂತಹ ಹಿರಿಯರಿಗೆ ಪ್ರಶಸ್ತಿ ನೀಡಿರುವುದು ಸಂತಸದ ವಿಚಾರವೇ ಸರಿ. ಆದರೆ ಅವರಿಗೆ ಮಂಡ್ಯ ಜಿಲ್ಲೆಯ ಕೋಟಾದಲ್ಲಿಯೋ ಅಥವಾ ಬೆಂಗಳೂರು ನಗರದ ಕೋಟಾದಲ್ಲಿ ಪ್ರಶಸ್ತಿ ನೀಡಲಿ. ಅದನ್ನು ಬಿಟ್ಟು ಹೆಚ್ಚುವರಿಯಾಗಿ ಪ್ರಶಸ್ತಿ ಕೊಡಬೇಕಾದವರ ಹೆಸರನ್ನು ಹಾಸನ ಜಿಲ್ಲೆಯ ಕೋಟಾದಲ್ಲಿ ಸೇರಿಸಿ ನೀಡುವುದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರ ಹಾಗೂ ಆಯ್ಕೆ ಸಮಿತಿ ಇದರ ಬಗ್ಗೆ ಎಚ್ಚರವಹಿಸಬೇಕು. ಇಡಿ ಪ್ರಶಸ್ತಿ ಪಟ್ಟಿಯಲ್ಲಿ ಯಾವುದೇ ಕ್ಷೇತ್ರದಲ್ಲಿಯೂ ಒಂದೇ ಒಂದು ಹೆಸರು ಹಾಸನ ಜಿಲ್ಲೆಯವರು ಸೇರದೆ ಇರುವುದು ಇಡಿ ಜಿಲ್ಲೆಯ ಜನ ಅತ್ಯಂತ ಬೇಸರ ಪಡುವ ಸಂಗತಿಯಾಗಿದೆ. ಈ ಹಿಂದೆ ಹಾಗೂ ಈ ವರ್ಷ ಆಗಿರುವ ತಪ್ಪನ್ನು ಸರಿಪಡಿಸಿ ದಯಮಾಡಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಹಾಸನ ಜಿಲ್ಲೆಯ ಸಾಧಕರನ್ನು ಗುರುತಿಸಿ ಗೌರವಿಸಬೇಕು ಎಂದು ಮನವಿ ಮಾಡಿದ್ದಾರೆ.
ಡಾ. ಹಂಪನಹಳ್ಳಿ ತಿಮ್ಮೇಗೌಡ ಬೇಸರ:
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಹಿರಿಯ ಜಾನಪದ ವಿದ್ವಾಂಸರಾದ ಡಾ. ಹಂಪನಹಳ್ಳಿ ತಿಮ್ಮೇಗೌಡ ಸಹ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಹಾಸನ ಜಿಲ್ಲೆಯ ಕೋಟಾದಲ್ಲಿ ಮಂಡ್ಯ ಜಿಲ್ಲೆಯ ಹಿರಿಯ ಸಾಹಿತಿ ಅ.ರಾ.ಮಿತ್ರ ಅವರಿಗೆ ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿಯೂ ಇದೇ ರೀತಿ ಹೊರಗಿನವರಿಗೆ ಹಾಸನ ಜಿಲ್ಲೆಯ ಹೆಸರಲ್ಲಿ ಪ್ರಶಸ್ತಿ ನೀಡಲಾಗಿತ್ತು. ಈ ಬಾರಿಯೂ ಅದೇ ಅನ್ಯಾಯ ಮುಂದುವರಿದಿದೆ. ರಾಜ್ಯ ಸರ್ಕಾರ ತಕ್ಷಣ ತನ್ನ ಲೋಪವನ್ನು ತಿದ್ದಿಕೊಂಡು ಹಾಸನ ಜಿಲ್ಲೆಯ ಹಿರಿಯ ಸಾಧಕರೊಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.