ಹಾವೇರಿ ಜಿಲ್ಲೆಯಲ್ಲಿಲ್ಲ ಹಕ್ಕಿಜ್ವರದ ಪ್ರಕರಣ

DC sanjay shettannavar
Published on

ಹಾವೇರಿ: ಜಿಲ್ಲೆಯಲ್ಲಿ ಇದುವರೆಗೆ ಹಕ್ಕಿಜ್ಚರ ಪ್ರಕರಣಗಳು ಕಂಡು ಬಂದಿಲ್ಲ. ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದ್ದಾರೆ.

ಹಕ್ಕಿ ಜ್ವರ ನಿಯಂತ್ರಣ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೊಟ್ಟೆ ಕೋಳಿಗಳ 3 ಫಾರಂಗಳಲ್ಲಿ ಅಂದಾಜು 95 ಸಾವಿರ ಕೋಳಿಗಳು, ಮಾಂಸದ 217 ಫಾರಂಗಳಲ್ಲಿ ಅಂದಾಜು 8 ಲಕ್ಷ ಕೋಳಿಗಳು ಹಾಗೂ 2 ಲಕ್ಷ ಹಿತ್ತಲ ಕೋಳಿಗಳಿವೆ. ಆಯಾ ತಾಲೂಕಿನ ಕೋಳಿ ಮಾಲೀಕರ ಹಾಗೂ ಲಭ್ಯವಿರುವ ಜೆಸಿಬಿಗಳ ವಿವರ ಸಂಗ್ರಹಿಸಬೇಕು ಎಂದರು.

ಪಕ್ಷಿಗಳ ಮೇಲೆ ನಿಗಾ ಇರಲಿ: ಯಾವುದೇ ಕೋಳಿ ಫಾರಂಗಳಲ್ಲಿ ಅಸಹಜವಾಗಿ ಕೋಳಿಗಳು ಮೃತಪಟ್ಟರೆ ಕೂಡಲೆ ಹತ್ತಿರದ ಪಶುವೈದ್ಯರಿಗೆ ತಿಳಿಸಿ ಮಾದರಿಗಳನ್ನು ಸಂಗ್ರಹಿಸಲು ಸಹಕರಿಸಬೇಕು. ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ವಲಸೆ ಅಥವಾ ಇತರ ಪಕ್ಷಿಗಳಲ್ಲಿ ಅಸ್ವಾಭಾವಿಕ ಸಾವು ಕಂಡು ಬಂದಲ್ಲಿ ಕೂಡಲೆ ವೀಕ್ಷಕರ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದು ಪಶುಪಾಲನೆ ಅಧಿಕಾರಿಗಳಿಗೆ ರವಾನಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೋಳಿ ಜ್ವರದ ಸರ್ವೆಕ್ಷಣೆಗಾಗಿ ಪ್ರತಿವಾರ ಜಿಲ್ಲೆಯಿಂದ 5 ಕೋಳಿಗಳ ರಕ್ತದ ಸೀರಂ ಮಾದರಿ, 5 ಕ್ಲೋಯೇಕಲ್ ಮತ್ತು 5 ಟ್ರೇಕೀಯಲ್ ಮಾದರಿ ಹಾಗೂ 5 ಪರಿಸರದಲ್ಲಿಯ ಕೋಳಿ ಹಿಕ್ಕೆ ಹಾಗೂ ನೀರಿನ ಮೂಲದ ಮಾದರಿ ಸಂಗ್ರಹಿಸಿ ದಾವಣಗೆರೆಯ ಪ್ರಾದೇಶಿಕ ಪ್ರಾಣಿ ರೋಗ ನಿರ್ಣಯ ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮವಹಿಸಲಾಗುತ್ತಿದೆ. ರೋಗ ಪತ್ತೆ ಹಾಗೂ ನಿಯಂತ್ರಣಕ್ಕೆ 32 ತಂಡ ರಚಿಸಲಾಗಿದೆ. | ರಾಜೀವ ಕೂಲೇರ, ಪಶುಪಾಲನೆ ಇಲಾಖೆ ಉಪನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net