

ಹಾವೇರಿ: ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಅಗತ್ಯವಿರುವ ಮಾನದಂಡಗಳನ್ನು ಹಾವೇರಿ ಜಿಲ್ಲೆ ಹೊಂದಿದೆ. ಹೀಗಾಗಿ ಮಾ. 5ರಂದು ಮಂಡಿಸಲಿರುವ ಬಜೆಟ್ನಲ್ಲಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಘೊಷಣೆ ಜತೆಗೆ 100 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಬೇಕು ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ತಿಳಿಸಿದರು.
ನಗರದ ಕೆಎಂಎಫ್ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಫೆ. 24ರಂದು ಜಿಲ್ಲೆಗೆ ಆಗಮಿಸಲಿರುವ ಸಿಎಂ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಗುವುದು. ಧಾರವಾಡ ಒಕ್ಕೂಟ ವ್ಯಾಪ್ತಿಯಲ್ಲಿ ಪ್ರತಿದಿನ 2.30ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ. ಇದರಲ್ಲಿ ಹಾವೇರಿ ಜಿಲ್ಲೆಯಿಂದಲೇ 20 ಸಾವಿರ ಹಾಲು ಉತ್ಪಾದಕರಿಂದ 1.10ಲಕ್ಷ ಲೀಟರ್ ಹಾಲು ಸೇರಿದೆ. ಕಳೆದ 35ವರ್ಷಗಳಿಂದಲೂ ಧಾರವಾಡ ಒಕ್ಕೂಟದ ಅಭಿವೃದ್ಧಿಯಲ್ಲಿ ಜಿಲ್ಲೆಯ ರೈತರ ಪಾತ್ರ ದೊಡ್ಡದಿದೆ. ಒಕ್ಕೂಟಕ್ಕೆ ಜಿಲ್ಲೆಯಿಂದ ಹೆಚ್ಚಿನ ಹಾಲು ಪೂರೈಕೆಯಾಗುತ್ತಿದ್ದರೂ ಸರ್ಕಾರದ ಯೋಜನೆಗಳು, ಸೌಲಭ್ಯಗಳು ನಾಲ್ಕು ಜಿಲ್ಲೆಗಳಿಗೆ ಸಮನಾಗಿ ಹಂಚಿಹೋಗುತ್ತಿದ್ದು, ಇಲ್ಲಿಯ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.
ಧಾರವಾಡ ಒಕ್ಕೂಟವು ಭೌಗೋಳಿಕವಾಗಿ ವಿಸ್ತಾರವಾಗಿದ್ದು, ಧಾರವಾಡದಲ್ಲಿರುವ ಸಂಸ್ಕರಣೆ ಘಟಕಕ್ಕೆ ಹಾಲು ಸಾಗಣೆ ವೆಚ್ಚ ಅಧಿಕವಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತಿಲ್ಲ. ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಕುರಿತು 2014ರಿಂದಲೇ ಮನವಿ ಸಲ್ಲಿಸುತ್ತ ಬರಲಾಗಿದೆ. ಪ್ರತ್ಯೇಕ ಒಕ್ಕೂಟ ರಚನೆಯಾದರೆ ಮಾರುಕಟ್ಟೆ ಸಮಸ್ಯೆ ಎದುರಾಗಬಹುದು ಎಂದು ವಿಳಂಬ ಮಾಡಲಾಗಿತ್ತು. ಆದರೆ, ಜಿಲ್ಲೆಯಲ್ಲಿ ಸಂಗ್ರಹವಾಗುವ ಹಾಲನ್ನು ಇಲ್ಲಿಯೇ ಮಾರಾಟ ಮಾಡಲು ಸಾಧ್ಯವಿದೆ. ಈಗಾಗಲೇ ಪ್ರತ್ಯೇಕ ಒಕ್ಕೂಟ ರಚನೆ ಕುರಿತ ಸಾಧ್ಯತೆ ವರದಿಯನ್ನು ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ ನಿವೃತ್ತ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದರು.
ಪ್ರತ್ಯೇಕ ಒಕ್ಕೂಟದಿಂದ ಧಾರವಾಡ ಒಕ್ಕೂಟಕ್ಕೆ ಮಾರಕವಾಗುವುದಿಲ್ಲ. ಬದಲಾಗಿ ಮತ್ತಷ್ಟು ಶಕ್ತಿಯುತವಾಗಿ ಬೆಳೆಯಲು ಅವಕಾಶವಾಗಲಿದೆ. ಈಗಾಗಲೇ ಉತ್ತರ ಕನ್ನಡ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಕುರಿತು ವರದಿ ಸಲ್ಲಿಸುವಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಅವರು ಸೂಚಿಸಿದ್ದಾರೆ. ಪ್ರತ್ಯೇಕ ಒಕ್ಕೂಟ ರಚನೆಯಿಂದ ಸಾಗಣೆ ವೆಚ್ಚ ಕಡಿಮೆಯಾಗಿ, ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ ಇದ್ದರು.
ಅನುದಾನ ನೀಡಲಿ: ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಹಣಕಾಸಿನ ನೆರವು ಅವಶ್ಯವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಸಾಲದೊಂದಿಗೆ ಒಕ್ಕೂಟ ರಚಿಸಿದರೆ ಅದರ ಹೊರೆ ರೈತರ ಮೇಲೆ ಬೀಳುತ್ತದೆ. ಅದಕ್ಕಾಗಿ ಮೂಲಸೌಕರ್ಯ ಹೆಚ್ಚಳಕ್ಕೆ 100ಕೋಟಿ ರೂ. ಅನುದಾನ ನೀಡಬೇಕು. ಒಕ್ಕೂಟ ರಚನೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ಶಾಸಕರು ಶಿಫಾರಸು ಪತ್ರ ಸಲ್ಲಿಸಿದ್ದಾರೆ. ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರತ್ಯೇಕ ಒಕ್ಕೂಟ ಸ್ಥಾಪನೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ಬೇಡಿಕೆ ಈಡೇರಿಸುವಂತೆ ಕೋರಿ ಜಿಲ್ಲೆಯ ಅಂದಾಜು 20 ಸಾವಿರ ರೈತರಿಂದ ಸಹಿ ಮಾಡಿದ ಮನವಿಪತ್ರವನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗುತ್ತಿದೆ ಎಂದು ಬಸವರಾಜ ಅರಬಗೊಂಡ ತಿಳಿಸಿದರು.