ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್​ಗಳ ವಿಶೇಷ ವಾರ್ಡ್

11-hvr-03
Published on

ಹಾವೇರಿ: ರಾಜ್ಯದಲ್ಲಿ ಕರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನಗರದ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್​ಗಳ ವಿಶೇಷ ವಾರ್ಡ್ ಆರಂಭಿಸಲಾಗಿದೆ.

ಈ ಹಿಂದೆ ಚೀನಾದಲ್ಲಿ ಕರೊನಾ ಆವರಿಸಿದ ಸಮಯದಲ್ಲಿ ಜಿಲ್ಲಾಸ್ಪತ್ರೆಯಲ್ಲಿ 5 ಬೆಡ್​ನ ವಾರ್ಡ್ ತೆರೆಯಲಾಗಿತ್ತು. ರಾಜ್ಯದಲ್ಲಿಯೂ ಕರೊನಾ ಶಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಾರ್ಡ್​ನಲ್ಲಿ ಬೆಡ್​ಗಳ ಸಂಖ್ಯೆ ವಿಸ್ತರಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರದ ಆದೇಶದಂತೆ ಮೂವರು ಸಿಬ್ಬಂದಿ ನೇಮಿಸಿದ್ದು, ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಶುಶ್ರೂಷಕರು ಕರೆ ಮಾಡಿದ ತಕ್ಷಣ ಬಂದು, ರೋಗಿಗೆ ಚಿಕಿತ್ಸೆ ನೀಡಲು ವೈದ್ಯರು ಮತ್ತು ತಜ್ಞ ವೈದ್ಯರನ್ನು ನೇಮಿಸಲಾಗಿದೆ.

ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯ ಸಭೆ ನಡೆಸಿ, ರೋಗದ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ. ರೋಗ ಹರಡುವ ಬಗೆ, ರೋಗ ಲಕ್ಷಣಗಳು, ಮುಂಜಾಗ್ರತಾ ಕ್ರಮ, ಚಿಕಿತ್ಸಾ ವಿಧಾನದ ಕುರಿತು ವಿವರ ತಿಳಿಸಲಾಗಿದೆ. ತಾಲೂಕು ಕೇಂದ್ರಗಳಲ್ಲೂ ವಿಶೇಷ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿಯೇ 25 ಸಾವಿರ ಮಾಸ್ಕ್
ನಗರದ ಜಿಲ್ಲಾಸ್ಪತ್ರೆಯಲ್ಲಿ 25 ಸಾವಿರ ಮಾಸ್ಕ್​ಗಳು ಲಭ್ಯವಿವೆ. ರೋಗಿಗಳಿಗೆ ಮತ್ತು ರೋಗಿಯನ್ನು ನೋಡಿಕೊಳ್ಳುವ ಒಬ್ಬರಿಗೆ ಉಚಿತವಾಗಿ ಮಾಸ್ಕ್ ನೀಡುತ್ತವೆ. ಜನರು ಕೂಡ ಜನಸಂದಣಿ ಇರುವ ಪ್ರದೇಶಗಳಿಗೆ ಹೋಗುವಾಗ ಮಾಸ್ಕ್ ಧರಿಸಿದರೆ ರೋಗದಿಂದ ದೂರವಿರಬಹುದು. ವಿದೇಶದಿಂದ ಬಂದವರಿಗೆ ನೆಗಡಿ, ಕೆಮ್ಮು, ಜ್ವರ ಕಂಡುಬಂದರೆ ಕೂಡಲೆ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಕೊಳ್ಳಬೇಕು. ಅವರ ಬಗ್ಗೆ ಗೊತ್ತಾದವರು ಮಾಹಿತಿ ನೀಡಿದರೆ ನಾವೇ ಕರೆತಂದು ತಪಾಸಣೆ ಮಾಡುತ್ತೇವೆ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗರಾಜ ನಾಯ್ಕ.

ಪ್ರವಾಸಿತಾಣಗಳು ಭಣಭಣ
ಕರೊನಾ ರೋಗದ ಭೀತಿ ವ್ಯಾಪಕವಾಗುತ್ತಿರುವುದರಿಂದ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಮೇಲೆಯೂ ಪರಿಣಾಮ ಬೀರಿದ್ದು, ಪ್ರವಾಸಿಗರ ಕೊರತೆ ಎದುರಿಸುತ್ತಿವೆ. ಶಿಗ್ಗಾಂವಿ ತಾಲೂಕು ಗೋಟಗೋಡಿಯಲ್ಲಿರುವ ಉತ್ಸವ ರಾಕ್​ಗಾರ್ಡ್​ನ್, ಬಾಡದಲ್ಲಿರುವ ಕನಕದಾಸರ ಅರಮನೆ, ಬ್ಯಾಡಗಿ ತಾಲೂಕು ಕಾಗಿನೆಲೆಯ ಕನಕ ಉದ್ಯಾನಕ್ಕೆ ಈ ತಿಂಗಳ ಆರಂಭದಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪ್ರತಿಯೊಂದು ತಾಣಕ್ಕೂ ಮಾರ್ಚ್ ಆರಂಭದಲ್ಲಿ ಪ್ರತಿದಿನ ಸರಾಸರಿ 200ರಿಂದ 250 ಪ್ರವಾಸಿಗರು ಬರುತ್ತಿದ್ದರು. ಈಗ ಆ ಸಂಖ್ಯೆ 100ರಿಂದ 50ಕ್ಕೆ ಕುಸಿದಿದೆ. ಹೀಗಾಗಿ ವ್ಯಾಪಾರವಿಲ್ಲದೇ ಪ್ರವಾಸಿ ತಾಣಗಳ ಬಳಿ ತಾತ್ಕಾಲಿಕವಾಗಿ ಶೆಡ್​ನಲ್ಲಿ ಆರಂಭಿಸಿದ್ದ ಟೀ, ಐಸ್ಕ್ರೀಮ್ ಚೂಡಾ, ಗೋಬಿಮಂಚೂರಿ ಅಂಗಡಿಗಳ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ ಕರೊನಾ ಪ್ರಕರಣ ಕಂಡು ಬಂದಿಲ್ಲ. ಆದರೂ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. 10 ಬೆಡ್​ಗಳ ವಿಶೇಷ ವಾರ್ಡ್ ಸ್ಥಾಪಿಸಲಾಗಿದೆ. ಹೊರರೋಗಿ ವಿಭಾಗಗಳಲ್ಲಿ ಶಂಕಿತ ಪ್ರಕರಣಗಳು ಕಂಡುಬಂದರೆ, ರಕ್ತ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಔಷಧವೂ ಲಭ್ಯವಿದೆ. ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮಾಸ್ಕ್ ಹಾಕಿಕೊಂಡು ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ.| ಡಾ. ನಾಗರಾಜ ನಾಯ್ಕ, ಜಿಲ್ಲಾ ಶಸ್ತ್ರಚಿಕಿತ್ಸಕ

ಕರೊನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿದಿನ ಮಾಹಿತಿ ನೀಡುವಂತೆ ಡಿಎಚ್​ಒಗೆ ಸೂಚಿಸಲಾಗಿದೆ. ವೈರಸ್ ಪತ್ತೆಯಾದರೆ ಅವರ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್​ಗಳನ್ನು ಸ್ಥಾಪಿಸಲಾಗಿದೆ. ವೈರಸ್ ಪತ್ತೆಯಾಗಿರುವ ದೇಶಗಳಿಗೆ ಸದ್ಯ ಯಾರೂ ಪ್ರವಾಸ ಕೈಗೊಳ್ಳಬಾರದು. ವಿದೇಶದಿಂದ ಆಗಮಿಸಿದ ವ್ಯಕ್ತಿಗಳಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಇತ್ಯಾದಿ ರೋಗ ಲಕ್ಷಣಗಳು ಕಂಡು ಬಂದರೆ ಸ್ವಯಂ ಚಿಕಿತ್ಸೆ ನಡೆಸದೇ ಆಸ್ಪತ್ರೆಗೆ ಬಂದು ದಾಖಲಾಗಬೇಕು.| ಕೃಷ್ಣ ಬಾಜಪೈ, ಜಿಲ್ಲಾಧಿಕಾರಿ ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net