ಹಾವುಗೊಲ್ಲರಿಗೆ ಜಾತಿ ಪತ್ರ ನೀಡಿ

9 nrp 2 web
Published on

ಎನ್.ಆರ್.ಪುರ: ಅಲೆಮಾರಿಗಳಾಗಿರುವ ಹಾವುಗೊಲ್ಲರಿಗೆ ಸರ್ಕಾರ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ. ಹಾವುಗೊಲ್ಲ, ಬೇಲರನ್ನು ಬುಡಕಟ್ಟು ಜನಾಂಗಕ್ಕೆ ಸೇರಿಸಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಕಡಹಿನಬೈಲು ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಒತ್ತಾಯಿಸಿದರು.ವಿಶ್ವ ಬುಡಕಟ್ಟು ದಿನದ ಅಂಗವಾಗಿ ಸೌತಿಕೆರೆ ಸಮೀಪದ ಶಾಲಾ ಆವರಣದಲ್ಲಿ ಬೀಡುಬಿಟ್ಟಿರುವ ಬುಡಕಟ್ಟು ಜನಾಂಗದ ಹಿರಿಯರನ್ನು ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್​ನಿಂದ ಮಂಗಳವಾರ ಸನ್ಮಾನಿಸಿ ಮಾತನಾಡಿದರು. ಆದಿವಾಸಿಗಳಿಗೆ ಜಮೀನು ನೀಡಲು ಕಾನೂನು ತೊಡಕು ಎದುರಾಗಿದೆ. ಅರಣ್ಯ ಹಕ್ಕು ಸಮಿತಿಯಲ್ಲಿ 5 ತಲೆಮಾರಿನ ಸಾಕ್ಷಿ ಕೇಳುತ್ತಾರೆ. ಇದರಿಂದ ಅವರಿಗೆ ಜಮೀನು ಮಂಜೂರು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಾಲ್ಮೀಕಿ ಸಂಘದ ಶೃಂಗೇರಿ ಕ್ಷೇತ್ರಾಧ್ಯಕ್ಷ ಎ.ಸಿ.ಶ್ರೀನಿವಾಸ್ ಮಾತನಾಡಿ, ಬಿಹಾರದಿಂದ ಆರಂಭವಾದ ಆದಿವಾಸಿಗಳ ಹೋರಾಟ ಇಂದು ದೇಶದ ಎಲ್ಲೆಡೆ ವ್ಯಾಪಿಸಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಅವರಿಗೆ ಜಮೀನು ಮಂಜೂರು ಮಾಡಿಕೊಡಬೇಕು. ಗ್ರಾಪಂ ಮಟ್ಟದಲ್ಲಿ ಸಮಿತಿಯೂ ಇದೆ. ಆದರೆ ಕಾನೂನು ತೊಡಕಿನಿಂದ ಜಮೀನು ಮಂಜೂರಾಗುತ್ತಿಲ್ಲ. ಆದಿವಾಸಿಗಳಿಗೆ ಶೇ.7ರಷ್ಟು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೆಶ್ ಮಾತನಾಡಿ, ಶಿಕ್ಷಣ ಸಮಾಜ ಬದಲಾವಣೆಯ ಸಾಧನ. ಆದ್ದರಿಂದ ಬುಡಕಟ್ಟು ಜನಾಂಗದವರು ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸ್ವಚ್ಛತೆಗೆ ಗಮನ ನೀಡಬೇಕು ಎಂದು ಸಲಹೆ ನೀಡಿದರು. ಬುಡಕಟ್ಟು ಜನಾಂಗದ ಹಿರಿಯರಾದ ಚಿನ್ನಮ್ಮ ಹಾಗೂ ನಾರಾಯಣ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net