ಹಾವು ಕಚ್ಚಿದಾಗ ತುರ್ತು ಚಿಕಿತ್ಸೆ ಮುಖ್ಯ

6sgr1
ಸಾಗರ ತಾಲೂಕಿನ ಹೊನ್ನೆಸರದ ಚರಕ ಶ್ರಮಜೀವಿ ಆಶ್ರಮದಲ್ಲಿ ಆಯೋಜಿಸಿದ್ದ ‘ಪರಿಸರದಲ್ಲಿ ಹಾವು’ ಉಪನ್ಯಾಸ ಕಾರ್ಯಕ್ರಮದಲ್ಲಿ ಉರಗ ಸಂರಕ್ಷಕರಾದ ನಾಗರಾಜ ಬೆಳ್ಳೂರು, ಅರುಣಕುಮಾರ್, ಕೊಟ್ರೇಶ್ ಇದ್ದರು.
Published on

ಸಾಗರ:ಹಾವು ಕಚ್ಚಿದಾಗ ಮೂಢನಂಬಿಕೆ, ಪೂಜೆಗೆ ಮೊರೆ ಹೋಗದೆ, ಕೂಡಲೇ ಆಸ್ಪತ್ರೆಗೆ ತೆರಳಿ ತುರ್ತು ಚಿಕಿತ್ಸೆ ಪಡೆಯುವ ಬಗ್ಗೆ ಗಮನಹರಿಸಿ ಎಂದು ರಿಪ್ಪನ್‌ಪೇಟೆಯ ಉರಗ ಸಂರಕ್ಷಕ ನಾಗರಾಜ ಬೆಳ್ಳೂರು ಹೇಳಿದರು. ಸಾಗರ ತಾಲೂಕಿನ ಹೊನ್ನೆಸರದ ಚರಕ ಶ್ರಮಜೀವಿ ಆಶ್ರಮದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪರಿಸರದಲ್ಲಿ ಹಾವು’ ಕುರಿತು ಉಪನ್ಯಾಸ ನೀಡಿದ ಅವರು, ಹಾವು ಕಡಿತವನ್ನು ಸರ್ಕಾರ ಅಸೂಚಿತ ರೋಗಗಳ ಪಟ್ಟಿಯಲ್ಲಿ ಸೇರಿಸಿರುವುದರಿಂದ ಪ್ರತಿ ಸಮುದಾಯ ಆರೋಗ್ಯ ಕೇಂದ್ರ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಹಾವು ಕಡಿತಕ್ಕೆ ಔಷಧ ಇರುತ್ತದೆ ಎಂದು ತಿಳಿಸಿದರು. ಹಾವು ಕಡಿತಕ್ಕೆ ಒಳಗಾದವರು ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಇದರಿಂದ ಅಪಾಯದಿಂದ ಪಾರಾಗಲು ಸಾಧ್ಯ. ಕಳೆದ ವರ್ಷ ಹಾವು ಕಡಿತದಿಂದ ವಿಶ್ವದಲ್ಲಿ 84 ಸಾವಿರ ಜನ ಮೃತಪಟ್ಟಿದ್ದಾರೆ. ಇದರಲ್ಲಿ 58 ಸಾವಿರ ಭಾರತೀಯರೇ ಆಗಿರುವುದು ಆತಂಕಕಾರಿ. ಇದಕ್ಕೆ ಕಾರಣ ಹಾವು ಕಡಿತ ಬಗ್ಗೆ ನಮ್ಮಲ್ಲಿರುವ ವೌಢ್ಯ ಎಂದರು. ಭಾರತದಲ್ಲಿ ಪ್ರತಿವರ್ಷ ಸರಾಸರಿ ಸರಾಸರಿ 5 ಲಕ್ಷ ಜನಕ್ಕೆ ಹಾವು ಕಡಿದರೆ, ಇದರಲ್ಲಿ 1.50 ಲಕ್ಷ ಜನ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ. ಹಾವು ನಮ್ಮ ಆಹಾರ ಸರಪಳಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಎರೆಹುಳುವನ್ನು ರೈತಮಿತ್ರ ಎನ್ನುತ್ತಿದ್ದೆವು. ಆದರೆ ಅತಿಯಾದ ರಾಸಾಯನಿಕ ಬಳಸಿ ಎರೆಹುಳು ಸಂತತಿಯನ್ನು ನಾಶ ಮಾಡಿದ್ದೇವೆ. ಈಗ ನಿಜವಾದ ರೈತಮಿತ್ರ ಹಾವುಗಳು. ಶೇ.30ರಷ್ಟು ಆಹಾರ ಬೆಳೆಗಳು ಇಲಿ, ಹೆಗ್ಗಣಗಳ ಪಾಲಾಗುತ್ತಿದ್ದುದನ್ನು ಹಾವುಗಳು ಉಳಿಸಿ ಕೊಡುತ್ತಿವೆ. ಹಾವಿಗೆ ಹಾಲೆರೆಯುವುದು ತೀರ ಅವೈಜ್ಞಾನಿಕ. ಒಂದೊಮ್ಮೆ ಹಾವು ಹಾಲು ಸೇವಿಸಿದರೆ ಅಜೀರ್ಣವಾಗಿ ಸಾವಿಗೀಡಾಗುವ ಸಾಧ್ಯತೆ ಇರುತ್ತದೆ ಎಂದು ಮಾಹಿತಿ ನೀಡಿದರು. ಉರಗಪ್ರೇಮಿ ಕೊಟ್ರೇಶ್, ಚರಕ ಸಂಸ್ಥೆ ಅಧ್ಯಕ್ಷೆ ಮಹಾಲಕ್ಷಿ, ಉಪಾಧ್ಯಕ್ಷೆ ನಾಗರತ್ನಾ, ಕಾರ್ಯದರ್ಶಿ ರಮೇಶ್, ಸಿಒಒ ಟೆರೆನ್ಸ್ ಪೀಟರ್, ಜೀವನ್ಮುಖಿ ಸಂಸ್ಥೆಯ ಎಂ.ವಿ.ಪ್ರತಿಭಾ, ಕೃಷ್ಣ, ಗಿರಿಜಾ, ಪದ್ಮಶ್ರೀ ಇತರರಿದ್ದರು.

ಭಾರತದಲ್ಲಿ ಇದುವರೆಗೆ 300 ಜಾತಿಯ ಹಾವುಗಳನ್ನು ಗುರುತಿಸಿದ್ದು, ಈ ಪೈಕಿ 72 ಜಾತಿಯ ಹಾವುಗಳು ಮಾತ್ರ ವಿಷಕಾರಿ. ಆಸ್ಟ್ರೇಲಿಯಾದಲ್ಲಿ 25ಕ್ಕೂ ಹೆಚ್ಚು ಅಪಾಯಕಾರಿ ಹಾವುಗಳಿದ್ದರೂ ಅಲ್ಲಿ ಹಾವು ಕಡಿತದಿಂದ ಮೃತಪಡುವವರ ಸಂಖ್ಯೆ ಎರಡರಿಂದ ಮೂರು ಜನ ಮಾತ್ರ. ಶೇ.85ರಷ್ಟು ಪ್ರಕರಣಗಳಲ್ಲಿ ಹಾವು ಕಡಿದು ಗಾಯವಾಗಿರುತ್ತದೆ. ಆದರೆ ವಿಷ ಬಿಟ್ಟಿರುವುದಿಲ್ಲ. ಗಾಬರಿ ಮತ್ತು ಭಯದಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ನಾಗರಾಜ ಬೆಳ್ಳೂರು ಉರಗ ಸಂರಕ್ಷಕ, ರಿಪ್ಪನ್‌ಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net