

ಅಫಜಲಪುರ: ತಾಲೂಕಿನಲ್ಲಿ ದುರಸ್ತಿ ಆಗಬೇಕಿರುವ ಮತ್ತು ಶಿಥಿಲಾವಸ್ಥೆ ತಲುಪಿರುವ ಸರ್ಕಾರಿ ಶಾಲಾ ಕೊಠಡಿಗಳ ಪಟ್ಟಿ ಮಾಡಿ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಗೊಬ್ಬೂರ(ಬಿ), ಚೌಡಾಪುರ, ಅತನೂರ, ಹಿಂಚಗೇರಾ, ಘತ್ತರಗಾ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಮಳೆಯಿಂದ ಸಂಭವಿಸಿದ ಹಾನಿ ಪರಿಶೀಲಿಸಿದ ಅವರು, ಹಿಂಚಗೇರಾದ ಸಿದ್ದರಾಮ ಪಾಟೀಲ್, ಶಾಂತಾಬಾಯಿ ಅಂಕಲಗಿ, ನೀಲಕಂಠಯ್ಯ ಆಕಾಶಮಠ ಮನೆಗಳಿಗೆ ತೆರಳಿ ಹಾನಿಯನ್ನು ವೀಕ್ಷಿಸಿ ಮಾಲೀಕರಿಗೆ ತಾತ್ಕಾಲಿಕವಾಗಿ ತಲಾ ೬೫೦೦ ರೂ. ವಿತರಿಸಿದರು. ನಷ್ಟದ ಪ್ರಮಾಣ ಆಧರಿಸಿ ಹೆಚ್ಚಿನ ಪರಿಹಾರ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು, ಶಾಲೆಗೆ ಹೋಗಲು ಸೂಕ್ತ ರಸ್ತೆ ನಿರ್ಮಿಸಬೇಕು., ಸೋರುತ್ತಿರುವ ಕೋಣೆಗಳನ್ನು ಸರಿಪಡಿಸಬೇಕು. ಶೌಚಗೃಹ ನಿರ್ಮಾಣ, ಶುದ್ಧ ಕುಡಿಯುವ ನೀರು ಇತರ ಬೇಡಿಕೆಗಳನ್ನು ಮುಂದಿಟ್ಟರು. ಇದಕ್ಕೆ ಸ್ಪಂದಿಸಿದ ಡಿಸಿ, ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ, ಶೌಚಗೃಹ ನಿರ್ಮಿಸಬೇಕು. ಶಾಲೆಯಲ್ಲಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸುವಂತೆ ಜತೆಗಿದ್ದ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಶಂಕರ ರೂಬೀಕರ, ತಾಪಂ ಇಒ ರಮೇಶ ಸುಲ್ಪಿ, ಪಿಡಿಒ ಮಹಾಂತೇಶ ಅವರಿಗೆ ತಾಕೀತು ಮಾಡಿದರು.
ಸಹಾಯಕ ಆಯುಕ್ತೆ ಮಮತಾ ಕುಮಾರಿ, ತಹಸೀಲ್ದಾರ್ ಸಂಜೀವಕುಮಾರ ದಾಸರ, ಹಿರಿಯ ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್. ಗಡಗಿಮನಿ, ಬಿಇಒ ಮಾರುತಿ ಹುಜರತಿ, ಗ್ರೇಡ್-೨ ತಹಸೀಲ್ದಾರ್ ಶರಣಬಸಪ್ಪ, ಪಿಎಸ್‌ಐ ಗಂಗಮ್ಮ, ಪಿಡಿಒ ಮಹಾಂತೇಶ ಯಾಳಗಿ, ಪ್ರಮುಖರಾದ ಸುಭಾಷ ಹಂಚನಾಳ, ಸಿದ್ದು ಹುಡೇದ, ಗೋಸಯ್ಯ ಆಲಮೇಲ, ಬಾಬು ಸಾಹುಕಾರ ಅಮ್ಮಣ್ಣಿ, ಮಲ್ಲಯ್ಯ ಕರಬಂಟನಾಳ, ಗಂಗಾಧರ ಕರಬಂಟನಾಳ ಇತರರಿದ್ದರು.
ಸೋರುತ್ತಿರುವ ಘತ್ತರಗಿ ಸರ್ಕಾರಿ ಸ್ಕೂಲ್‌ಗೆ ಭೇಟಿ
ಮಳೆಯಿಂದ ಸೋರುತ್ತಿರುವ ಘತ್ತರಗಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡಿಸಿ ಫೌಜಿಯಾ ತರನ್ನುಮ್ ಭೇಟಿ ನೀಡಿ ಕೋಣೆಗಳು ಮತ್ತು ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು. ಪಂಚಾಯತ್ ರಾಜ್ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುದಾನದಲ್ಲಿ ಈ ಶಾಲೆ ಕೋಣೆಗಳನ್ನು ದುರಸ್ತಿ ಮಾಡಿ. ಸರ್ಕಾರದ ಅನುದಾನದಿಂದ ಹೊಸ ಕಟ್ಟಡ ನಿರ್ಮಿಸಿ ಸೂಕ್ತ ಸೌಕರ್ಯ ಒದಗಿಸಿ ಎಂದು ಸೂಚಿಸಿದರು.
ಘತ್ತರಗಾದಲ್ಲಿ ಪ್ರಖ್ಯಾತ ಶ್ರೀ ಭಾಗ್ಯವಂತಿ ದೇವಸ್ಥಾನವಿದ್ದು, ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ ಅಸಂಖ್ಯ ಭಕ್ತರು ಬರುತ್ತಾರೆ. ಹೀಗಾಗಿ ಸೂಕ್ತ ಸೌಕರ್ಯ ಒದಗಿಸಬೇಕು. ದೇವಸ್ಥಾನದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಕಸ ತುಂಬಿರುವ ಚರಂಡಿಗಳನ್ನು ಕ್ಲೀನ್ ಮಾಡಿ. ಮಳೆಗಾಲ ಇರುವುದರಿಂದ ರೋಗಗಳು ಬರದಂತೆ ಮುಖ್ಯ ರಸ್ತೆ ಸೇರಿ ಬಡಾವಣೆಗಳಲ್ಲಿ ಬ್ಲೀಚಿಂಗ್ ಫೌಡರ್ ಸಿಂಪಡಿಸುವಂತೆ ಪಿಡಿಒಗೆ ಸೂಚನೆ ನೀಡಿದರು.
ಅಫಜಲಪುರ ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದೇನೆ. ಅಲ್ಲದೆ ದುರಸ್ತಿ ಮಾಡಬೇಕಿರುವ ಮತ್ತು ಸಂಪೂರ್ಣ ಹಾನಿಯಾದ ಶಾಲೆಗಳ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
| ಫೌಜಿಯಾ ತರನ್ನುಮ್
ಜಿಲ್ಲಾಧಿಕಾರಿ