ಹಾಳಾದ ಕಟ್ಟಡದಲ್ಲೇ ತರಗತಿ!

23 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾಲೇಜು ಕಟ್ಟಡ ಸಂಪೂರ್ಣ ಶಿಥಿಲವಾಗಿ ಸೋರುವ ಕೊಠಡಿಗಳಲ್ಲೇ ಪಾಠ ಆಲಿಸುವಂತಹ ಸ್ಥಿತಿಗೆ ತಲುಪಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಪರ್ಯಾಯ ವ್ಯವಸ್ಥೆಗೆ ಮುಂದಾಗಿರುವುದು ವಿಪರ್ಯಾಸವೇ ಸರಿ.
ಇದು ಇಲ್ಲಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣ ಬಳಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸ್ಥಿತಿಯಾಗಿದೆ. ಕಟ್ಟಡದ ಮೇಲ್ಛಾವಣಿ ಬಹುತೇಕ ಹಾಳಾಗಿ ಹಂಚುಗಳು ಒಡೆದಿದ್ದು, ಮಳೆ ನೀರು ಕೊಠಡಿ ಆವರಿಸುವಂತಾಗಿದೆ. ಕೆಲ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಕೊಠಡಿ ಸಂಪೂರ್ಣ ಸೋರುತ್ತಿರುವ ಕಾರಣ ಶಿಕ್ಷಕರು ಸೇರಿ ವಿದ್ಯಾರ್ಥಿನಿಯರು ಛತ್ರಿ ಹಿಡಿದುಕೊಂಡೇ ತರಗತಿಗಳಲ್ಲಿ ಕುಳಿತುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.
ಒಂದು ಸರ್ಕಾರಿ ಕಾಲೇಜಿನಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತರಗತಿಗಳನ್ನು ಬೇರೆ ಕಟ್ಟಡಕ್ಕೆ ವರ್ಗಾವಣೆ ಮಾಡಿ ವಿದ್ಯಾರ್ಥಿನಿಯರಿಗೆ ಸುಸಜ್ಜಿತ ಸೌಲಭ್ಯ ಒದಗಿಸಿಲ್ಲ. ಇದು ಅವರಿಗೆ ಶಿಕ್ಷಣ ಬಗ್ಗೆ ಇರುವ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.
2014-15ನೇ ಸಾಲಿನಲ್ಲಿ ಗಾಂಧಿಚೌಕ್‌ನಲ್ಲಿನ ಪ್ರಾಥಮಿಕ ಶಾಲಾ ಕಟ್ಟದಲ್ಲಿ ಕಾಲೇಜು ಆರಂಭಿಸಲಾಗಿತ್ತು. ಬಳಿಕ 2019ರಲ್ಲಿ ಕ್ರೀಡಾಂಗಣ ಬಳಿಯ ಇಎಲ್‌ಟಿಸಿ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಈ ಕಟ್ಟಡದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮೇಲ್ಛಾವಣಿ ಕುಸಿಯುವ ಹಂತದಲ್ಲಿ ಇರುವ ಕಾರಣ ನಿತ್ಯವೂ ವಿದ್ಯಾರ್ಥಿಗಳು ಭಯದಲ್ಲೇ ಪಾಠ ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮಳೆಯಾದಾಗ ನೀರು ಕೊಠಡಿ ಸೇರಿ ರಾಡಿಯಾಗುತ್ತಿದೆ. ಕುಳಿತುಕೊಳ್ಳಲು ಜಾಗವಿಲ್ಲದಷ್ಟು ಸೋರುತ್ತಿದ್ದರೂ ದುರಸ್ತಿ ಕಾರ್ಯ ಅಥವಾ ಬೇರೆಡೆಗೆ ಸ್ಥಳಾಂತರ ಮಾಡುತ್ತಿಲ್ಲ. ಮೇಲ್ಛಾವಣಿಯಿಂದ ಹುಳುಗಳು ಬೀಳುತ್ತಿದ್ದು, ಕೊಡೆ ಹಿಡಿದುಕೊಂಡೇ ಪಾಠ ಕೇಳುವಂತಾಗಿದೆ. ಇದಲ್ಲದೆ, ತಂಪಿನಲ್ಲಿ ಕುಳಿತು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ದುರಸ್ತಿ ಕಾರ್ಯ ನಡೆಸಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net