ಹಾಳಾಗಿದೆ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿ

7 lxr 3
Published on

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಹಾದು ಹೋಗಿರುವ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟು ತಗ್ಗು-ಗುಂಡಿಗಳು ಬಿದ್ದಿವೆ. ವಾಹನಗಳು ರಸ್ತೆಯಲ್ಲಿ ವಾಲಾಡುತ್ತ ಸಾಗುತ್ತಿವೆ.

ತಾಲೂಕಿನ ವ್ಯಾಪ್ತಿಯಲ್ಲಿ 22 ಕಿ.ಮೀನಷ್ಟು ಹೆದ್ದಾರಿ ಇದೆ. ಬಹುತೇಕ ರಸ್ತೆ ಹಾಳಾಗಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಗುಂಡಿಗಳನ್ನು ಮುಚ್ಚಲಾಗುತ್ತದೆ. ಆದರೆ, ನಿತ್ಯ ಎಂ. ಸ್ಯಾಂಡ್, ಜಲ್ಲಿಕಲ್ಲು ಸಾಗಿಸುವ ಟಿಪ್ಪರ್​ಗಳ ಅಬ್ಬರಕ್ಕೆ ರಸ್ತೆ ದುರಸ್ತಿ ಮಾಡಿದ ಎರಡೇ ದಿನದಲ್ಲಿ ಹಾಳಾಗುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರು, ಜನರಿಗೆ ಬೇಸಿಗೆಯಲ್ಲಿ ಧೂಳಿನ ಮಜ್ಜನವಾದರೆ ಮಳೆಗಾಲದಲ್ಲಿ ರಾಡಿ ನೀರಿನ ಸಿಂಚನವಾಗುತ್ತದೆ.

ಗದಗ-ಲಕ್ಷ್ಮೇಶ್ವರ ಒಟ್ಟು 35 ಕಿ.ಮೀ ಅಂತರವಿದೆ, ಅದರಲ್ಲಿ ಲಕ್ಷ್ಮೇಶ್ವರದಿಂದ ಮಾಗಡಿಯವರೆಗಿನ 10 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಗೊಜನೂರ ಹತ್ತಿರದ ಹಳ್ಳದ ಪರ್ಸಿ ಕಿತ್ತು ಮೊಣಕಾಲುದ್ದ ಗುಂಡಿ ಬಿದ್ದಿದೆ. ಮಾಗಡಿ ಹತ್ತಿರ ಸೇತುವೆ ನಿರ್ವಿುಸಿದ್ದು, ರಸ್ತೆ ಸರಿಪಡಿಸಿಲ್ಲ. ಇನ್ನು ಮುಳಗುಂದ, ಹರ್ತಿ ಸಮೀಪದ ರಸ್ತೆಗಳಲ್ಲಿಯೂ ಗುಂಡಿಗಳದ್ದೇ ಕಾರುಬಾರು. ಬಸ್, ಲಾರಿ, ಟಿಪ್ಪರ್ ಹೇಗೋ ಸಾಗುತ್ತಿವೆ. ಆದರೆ, ಕಾರ್, ಬೈಕ್ ಸವಾರರು ಪ್ರಯಾಸಪಟ್ಟು ಸಾಗಬೇಕಿದೆ.

ಅನಾಹುತ, ಪ್ರಾಣಹಾನಿ ಸಂಭವಿಸುವ ಮೊದಲೇ ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕು ಎಂದು ಪ್ರೊ. ಭಾರ್ಗವ ಎಚ್.ಕೆ., ರೈತರಾದ ವಿರೂಪಾಕ್ಷ ಆದಿ, ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ ಇತರರು ಆಗ್ರಹಿಸಿದ್ದಾರೆ. ಈ ಕುರಿತು ತಾಲೂಕು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಎ. ರಾಮಮೂರ್ತಿ ಪ್ರತಿಕ್ರಿಯಿಸಿ, ರಸ್ತೆಗಳಲ್ಲಿನ ತಗ್ಗು ಮುಚ್ಚಲು ಟೆಂಡರ್ ಕರೆಯಲಾಗುವುದು. ಸಂಪೂರ್ಣ ಹಾಳಾಗಿರುವ ರಸ್ತೆಯನ್ನು ತಾತ್ಕಾಲಿಕವಾಗಿ ರಿಪೇರಿ ಮಾಡಿಸಲಾಗುವುದು ಎಂದರು.

ರಸ್ತೆ, ಚರಂಡಿ ರಿಪೇರಿಗೆ ಒತ್ತಾಯ

ಲಕ್ಷ್ಮೇಶ್ವರ: ಪಟ್ಟಣದ ವಾರ್ಡ್ ನಂ. 2ರಲ್ಲಿನ ಹಳ್ಳದಕೇರಿ ಓಣಿಯ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ರಸ್ತೆ ಮೇಲೆಯೇ ಕೊಳಚೆ ನೀರು ಹರಿಯುತ್ತದೆ. ಕೂಡಲೆ ಪುರಸಭೆಯವರು ರಸ್ತೆ, ಚರಂಡಿಗಳನ್ನು ದುರಸ್ತಿಗೊಳಿಸಬೇಕು ಎಂದು ಸ್ಥಳೀಯರು ಶುಕ್ರವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಚರಂಡಿಗಳನ್ನು ದುರಸ್ತಿಗೊಳಿಸಬೇಕು ಎಂದು ಕಳೆದ ಹಲವಾರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದೇವೆ. ಇತ್ತೀಚೆಗೆ ಗರ್ಭಿಣಿಯೊಬ್ಬರು ರಸ್ತೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ. ವಾರ್ಡ್​ನಲ್ಲಿನ ಕೆಲ ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಆಗಿ ವರ್ಷ ಕಳೆದರೂ ಕಾಮಗಾರಿ ಪ್ರಾರಂಭವಾಗಿಲ್ಲ ಈ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಮುಖ್ಯಾಧಿಕಾರಿಗಳ ಪರವಾಗಿ ವ್ಯವಸ್ಥಾಪಕಿ ಮಂಜುಳಾ ಹೂಗಾರ ಮನವಿ ಸ್ವೀಕರಿಸಿದರು. ಶಿವಣ್ಣ ಹಾದಿಮನಿ, ಫಕೀರೇಶ ಅಮರಶೆಟ್ಟಿ, ಪ್ರಕಾಶ ಹಾದಿಮನಿ, ಬಸವರಾಜ ಹೊಸಮನಿ, ಶಿವಣ್ಣ ಕಟಗಿ, ನಾಗಪ್ಪ ಓಂಕಾರಿ, ಮಂಜಪ್ಪ ಮುಳಗುಂದ ಮಾಂತಪ್ಪ ನಾವ್ಹಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net