

ಹಾಸನ: ಹಾಸನ ತಾಲೂಕಿನ ಹಾಲೇನಳ್ಳಿ ಗ್ರಾಮದ ಮಹಾದ್ವಾರ ಉದ್ಘಾಟನಾ ಸಮಾರಂಭ ಹಾಗೂ ಬಾಳೆಹೊನ್ನೂರು ರಂಭಾಪುರಿ ಶ್ರೀ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ, ಉಧ್ಬವ ಶಿವಲಿಂಗಕ್ಕೆ ಬೆಳ್ಳಿ ಕವಚ ಧಾರಣೆ ಹಾಗೂ ಧಾರ್ಮಿಕ ಸಮಾರಂಭ ಸೋಮವಾರ ಜರುಗಿತು. ಈ ಸಮಾರಂಭದ ಉದ್ಘಾಟನೆಯನ್ನು ರಂಭಾಪುರಿ ಶ್ರೀಗಳು ನೆರವೇರಿಸಿದರು.
ನಂತರ ಆಶೀರ್ವಚನ ನೀಡಿದ ರಂಭಾಪುರಿ ಸ್ವಾಮೀಜಿ, ಭಾರತ ದೇಶ ಎಲ್ಲಾ ವರ್ಗಗಳ ಜನರು ಸಮಾನತೆಯ ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗಿದೆ. ವೀರಶೈವ ಧರ್ಮ ಎಲ್ಲಾ ಸಮಾಜದವರನ್ನು ಪ್ರೀತಿಯಿಂದ ಕಾಣುವ ಸಮಾಜವಾಗಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಅವರ ಸಮಕಾಲೀನ ವಚನಕಾರರ ಹಾದಿಯನ್ನು ನೋಡಿ ಸಮಾಜದ ಸಮಾನತೆಗೆ ಕಾರಣವಾಗಿದೆ. ಧರ್ಮ, ನಂಬಿಕೆಯೊಂದಿಗೆ ನಾವು ಬದುಕಬೇಕಾಗಿದೆ. ಬದುಕಿನಲ್ಲಿ ಧರ್ಮದ ಹಾದಿಯಲ್ಲಿ ನಡೆಯಬೇಕಿದೆ. ಮಾತುಗಳು ಕೃತಿಯಾಗಬೇಕು. ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಚಂಚಲ ಮನಸ್ಸನ್ನು ಹೋಗಲಾಡಿಸಿ ಸ್ವಚ್ಛ ಮನಸ್ಸು ಉಳ್ಳವರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಡೆಯೂರು ಶ್ರೀಗಳು, ನುಗ್ಗೇಹಳ್ಳಿ ಪುರವರ್ಗ ಹಿರೇಮಠ ಮಠಾಧೀಶರಾದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಕರ್ಪೂರಹಳ್ಳಿಯ ಜಂಗಮ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾರ್ಜುವಳ್ಳಿ ರಂಭಾಪುರಿ ಶಾಖಾ ಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಕರಿಬಸವಯ್ಯ ಶಾಸ್ತ್ರಿಗಳು ಬಾಗಿವಾಳು, ಅಖಿಲ ಭಾರತ ವೀರಶೈವ ಮಹಾಸಭಾ ಹಾಸನ ತಾಲೂಕು ಘಟಕ ಅಧ್ಯಕ್ಷ ಕಟ್ಟಾಯ ಶಿಕುಮಾರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ದ್ಯಾವೇಗೌಡ, ಹಾಸನ ಬಸವ ಕೇಂದ್ರದ ಅಧ್ಯಕ್ಷ ಯು.ಎಸ್. ಬಸವರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಸ್ವಾಮಿ, ಹಾಲೇನಳ್ಳಿ ಗ್ರಾಮದ ಮುಖಂಡರಾದ ಎಚ್.ಬಿ. ನಂಜಪ್ಪ, ಈಶ್ವರಪ್ಪ ಹಾಗೂ ಗ್ರಾಮಸ್ಥರು, ಸಾರ್ವಜನಿಕರು ಭಾಗವಹಿಸಿದ್ದರು.