ಹಾಲುಗಂಬ ಏರುವ ಸ್ಪರ್ಧೆ ಮನಮೋಹಕ

Untitled design(4)
ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಕನಕಗಿರಿ ಕನಕಾಚಲ ದೇವಸ್ಥಾನ ಮುಂಭಾಗದಲ್ಲಿ ಹಾಲುಗಂಬ ಏರುವ ಸ್ಪರ್ಧೆ ಬುಧವಾರ ನಡೆಯಿತು.
Published on

ಕನಕಗಿರಿ: ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಇಲ್ಲಿನ ಐತಿಹಾಸಿಕ ಕನಕಾಚಲಪತಿ ದೇವಸ್ಥಾನ ಮುಂಭಾಗದಲ್ಲಿ ಪ್ರತಿ ವರ್ಷದಂತೆ ಹಾಲುಗಂಬ ಏರುವ ಸ್ಪರ್ಧೆ ಬುಧವಾರ ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಶ್ರೀಕೃಷ್ಣ ಜನ್ಮಾಷ್ಟಮಿಯ ಮೂಲ ನಕ್ಷತ್ರ ದಿನದಂದು ಗೊಲ್ಲ ಸಮುದಾಯದ ಯುವಕರು ಹಾಲುಗಂಬ ಏರುವುದು ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ. ಅದಕ್ಕಾಗಿಯೇ ಬಂಕಾಪುರ, ಕನಕಗಿರಿ, ಗುಡದೂರು, ಉಮಳಿ ಕಾಟಾಪೂರ ಇತರ ಗ್ರಾಮಗಳಲ್ಲಿನ ಗೊಲ್ಲರು ಹಸುವಿನ ಹಾಲು, ಮೊಸರು, ಬೆಣ್ಣೆಯನ್ನು 5 ದಿನಗಳ ಕಾಲ ಸಂಗ್ರಹಿಸಿ ದೇವಸ್ಥಾನಕ್ಕೆ ಸಮರ್ಪಿಸುವ ಮೂಲಕ ಸ್ಪರ್ಧೆ ನಡೆಸಲಾಯಿತು. ಸಂಜೆ ಆರಂಭವಾದ ಹಾಲುಗಂಬ ಸ್ಪರ್ಧೆಯಲ್ಲಿ ಒಬ್ಬರ ಮೇಲೊಬ್ಬರು ಏರಿ ನೆತ್ತಿಯ ಮೇಲಿನ ಮಂಟಪದ ಸುತ್ತಲೂ ಕಟ್ಟಿದ್ದ ಕರ್ಜಿಕಾಯಿ, ಉತ್ತತ್ತಿ, ಕೊಬ್ಬರಿ ಸೇರಿ ನಾನಾ ದಿನಸಿಗಳನ್ನು ಹರಿಯಲು ಮುಂದಾದರು. ಹಾಲುಗಂಬ ಏರಿ, ಜಾರುವುದನ್ನು ನೆರೆದಿದ್ದವರು ನೋಡಿ ಖುಷಿಪಟ್ಟರು.

ಇರುವ 3 ಅವಕಾಶಗಳಲ್ಲಿ ಯುವಕರು ಮಂಟಪದವರೆಗೆ ಹತ್ತಲು ಹರಸಾಹಸಪಟ್ಟರೂ ಸಾಧ್ಯವಾಗಲಿಲ್ಲ. ಕೊನೆಗೂ ಹಗ್ಗದ ಸಹಾಯದಿಂದ ತುದಿಯಲ್ಲಿ ಕಟ್ಟಲಾಗಿದ್ದ ತಿನಿಸುಗಳನ್ನು ತಿಂದರು. ಗೊಲ್ಲ ಮನೆತನದವರು ಲಕ್ಷ್ಮೀನರಸಿಂಹ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕಾರ್ಯಕ್ರಮ ಸಂಪನ್ನಗೊಂಡಿತು. ಇದಕ್ಕೂ ಮೊದಲು ರಾಜಬೀದಿಯ ಮೂಲಕ ಎದುರು ಹನುಮಪ್ಪ ದೇವಸ್ಥಾನದವರೆಗೆ ಅಶ್ವಾರೋಹಣ ಉತ್ಸವ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net