ಹಾಲು, ನೀರು ಕುಡಿತಾನೆ ಕಲ್ಲಿನ ನಂದಿ!

30 KLB 06
Published on

ಕಲಬುರಗಿ: ಜನಮರುಳೋ ಜಾತ್ರೆ ಮರುಳೋ ಎನ್ನುವಂತೆ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿರುವ ನಂದಿ ವಿಗ್ರಹ/ಮೂರ್ತಿಗಳು ನೀರು ಮತ್ತು ಹಾಲು ಕುಡಿಯುತ್ತಿದ್ದು, ಜನರು ತಂಡೋಪತಂಡವಾಗಿ ಆಗಮಿಸಿ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಎರಡು ವಾರದ ಹಿಂದೆ ಬೀದರ್ ಜಿಲ್ಲೆಯ ಮರಕುಂದಾ, ನಿರ್ಣಾ, ಮಂಗಲಗಿ, ನಾರಾಯಣಪುರಗಳಲ್ಲಿ ಕಲ್ಲಿನ ನಂದಿ ಮೂರ್ತಿ ನೀರು ಕುಡಿದಿರುವ ವಿಸ್ಮಯ ನಡೆದಿತ್ತು. ಇದೀಗ ಇಂತಹ ಪವಾಡಗಳು ಕಲಬುರಗಿ ಜಿಲ್ಲೆಯಲ್ಲೂ ನಡೆದಿದ್ದು, ಎಲ್ಲೆಡೆ ಕಲ್ಲಿನ ನಂದಿ ವಿಗ್ರಹಕ್ಕೆ ಜನರು ಹಾಲು, ನೀರು ಕುಡಿಸುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ.

ಸೇಡಂ ತಾಲೂಕಿನ ಕುರಕುಂಟಾದಲ್ಲಿರುವ 8-10 ವರ್ಷ ಹಳೆಯದಾದ ಬಸವನ ಮೂರ್ತಿ (ಅಗ್ಗಿ ಬಸವೇಶ್ವರ) ಶನಿವಾರ ಬೆಳಗ್ಗೆಯಿಂದ ಹಾಲು ಕುಡಿಯುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಿಳೆಯೊಬ್ಬಳು ಬೆಳಗ್ಗೆ ಹೋಗಿ ಹಾಲು ಕುಡಿಸಿದ್ದಾರೆ. ಈ ವಿಷಯವನ್ನು ಹಳ್ಳಿ ಜನರಿಗೆ ತಿಳಿಸಿದ ಎರಡ್ಮೂರು ನಿಮಿಷದಲ್ಲೇ ಗ್ರಾಮಸ್ಥರು ದೇಗುಲಕ್ಕೆ ಬಂದು ವಿಸ್ಮಯ ಕಣ್ತುಂಬಿಕೊಂಡಿದ್ದಾರೆ. ಬಳಿಕ ಮಹಿಳೆಯರು ತಂಡೋಪ-ತAಡವಾಗಿ ಆಗಮಿಸಿ ಹಾಲು ಕುಡಿಸುತ್ತಿದ್ದಾರೆ. ಅಲ್ಲದೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹಾಕುತ್ತಿದ್ದಾರೆ.

ಆಳಂದ ತಾಲೂಕಿನ ಖಜೂರಿ ಗ್ರಾಮದ ಬಸವಣ್ಣನ ದೇಗುಲದಲ್ಲಿ ಐದು ವರ್ಷದ ಹಿಂದೆ ಪ್ರತಿಷ್ಠಾಪಿಸಿದ ಕಲ್ಲಿನ ನಂದಿ ಗುರುವಾರ ರಾತ್ರಿ ನೀರು ಕುಡಿದಿದೆ. ಅಧಿಕ ಮಾಸದ ನಿಮಿತ್ತ ಭಕ್ತರೊಬ್ಬರೂ ನಂದಿಗೆ ಪೂಜೆ ಸಲ್ಲಿಸಿ ಬಟ್ಟಲಿನಿಂದ ನೀರು ಕುಡಿಸಲು ಮುಂದಾಗಿದ್ದಾರೆ. ವಿಸ್ಮಯವೆಂಬAತೆ ಒಂದು ಬಟ್ಟಲು ನೀರು ಖಾಲಿ ಮಾಡಿದೆ. ಬಳಿಕ ಊರಿನವರಿಗೆ ವಿಷಯ ಹೇಳಿದ್ದು, ಎಲ್ಲರೂ ಆಗಮಿಸಿ ಪವಾಡವನ್ನು ನೋಡಿದ್ದಾರೆ. ರಾತ್ರಿಯಿಡೀ ಸರದಿ ನಿಂತು ಜನರು ದರ್ಶನ ಪಡೆದಿದ್ದಾರೆ. ಇನ್ನುಳಿದಂತೆ ಆಳಂದ ತಾಲೂಕಿನ ಆಳಂಗ, ಬೆಳಮಗಿ, ವಾಡಿಯ ಸೋನುಬಾಯಿ ಬಡಾವಣೆಯ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನ, ಶಹಾಬಾದ್ ತಾಲೂಕಿನ ದೇವನತೆಗನೂರಿನ ಶ್ರೀ ಶಿವಯೋಗೇಶ್ವರ ದೇವಸ್ಥಾನದನಲ್ಲೂ ಇಂತಹ ಘಟನೆಗಳು ನಡೆದಿವೆ.

ಒಟ್ಟಿನಲ್ಲಿ ಕಲ್ಲಿನ ನಂದಿ ಬಸವಣ್ಣನಿಗೆ ಅಪಾರ ಭಕ್ತರು ನೀರು ಕುಡಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಪ್ರಪಂಚ ವಿಸ್ಮಯಗಳ ಆಗರವಾಗಿದ್ದು, ಇಲ್ಲಿ ಆಶ್ಚರ್ಯ, ಪವಾಡದಂಥ ಚಕಿತಗಳು ನಡೆಯುತ್ತಲೇ ಇರುತ್ತವೆ. ಇಂಥ ವಿಸ್ಮಯಗಳೇ ಜನರಲ್ಲಿ ದೇವರ ಮೇಲಿನ ನಂಬಿಕೆ ಹೆಚ್ಚಿಸುತ್ತವೆ ಎಂದು ಹೇಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net