ಹಾಲು ಖರೀದಿ ದರ ಲೀಟರ್‌ಗೆ 2 ರೂ. ಹೆಚ್ಚಳ

19-klr-12
Published on

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಹಾಲು ಶೇಖರಣೆ ಹೆಚ್ಚಾಗಿರುವುದರಿಂದ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಲು ಜಿಲ್ಲಾ ಹಾಲು ಒಕ್ಕೂಟ ತೀರ್ಮಾನಿಸಿದೆ.

ಮಂಗಳವಾರ ನಡೆದ ಹಾಲು ಒಕ್ಕೂಟದ ಆಡಳಿತ ಮಂಡಳಿ ತುರ್ತು ಸಭೆಯಲ್ಲಿ ಹಾಲು ಖರೀದಿ ಹೆಚ್ಚಳ ಸಂಬಂಧ ಉತ್ಪಾದಕರು ಮತ್ತು ಒಕ್ಕೂಟದ ಸದಸ್ಯರ ಬೇಡಿಕೆ ಪರಿಗಣಿಸಿ ಹಾಲು ಖರೀದಿ ದರ ಪರಿಷ್ಕರಿಸಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಶಾಸಕ ಕೆ.ವೈ.ನಂಜೇಗೌಡ ಸಮ್ಮತಿಸಿದರು.

ಪರಿಷ್ಕೃತ ದರ ಜ.24ರಂದು ಬೆಳಗಿನ ಸರತಿಯಿಂದ ಜಾರಿಗೆ ಬರಲಿದ್ದು, ಶೇ.3.5 ಫ್ಯಾಟ್, ಶೇ.8.5 ಎಸ್.ಎನ್.ಎಫ್ ಅಂಶವುಳ್ಳ ಪ್ರತಿ ಲೀಟರ್ ಹಾಲಿಗೆ ಪ್ರಸ್ತುತ ನೀಡುತ್ತಿರುವ ದರ 24 ರಿಂದ 26 ರೂ. ಉತ್ಪಾದಕರಿಗೆ ಮತ್ತು ರೂ.28.15 ನಂತೆ ಸಂಘಕ್ಕೆ ಪಾವತಿಸಲು ತೀರ್ಮಾನಿಸಲಾಗಿದೆ.

ಕರೊನಾ ಸಂಕಷ್ಟದಿಂದ ಬಳಲುತ್ತಿರುವ ಹಾಲು ಉತ್ಪಾದಕರ ಉತ್ಪಾದನಾ ವೆಚ್ಚ ಕಡಿಮೆ ಮಾಡಲು, ಮುಂಬರುವ ಬೇಸಿಗೆಯಲ್ಲಿ ಹಸಿರು ಮೇವಿನ ಕೊರತೆ ನೀಗಿಸಲು ಇನ್ನೂ ಹೆಚ್ಚಿನ ಪಶು ಆಹಾರ ಖರೀದಿ ರಿಯಾಯಿತಿ ದರ ನೀಡುವಂತೆ ಕರ್ನಾಟಕ ಹಾಲು ಮಹಾ ಮಂಡಳಿಯನ್ನು ಕೋರಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಒಕ್ಕೂಟದ ಆಡಳಿತ ಮಂಡಳಿ ಸದಸ್ಯರಾದ ಜಯಸಿಂಹಕೃಷ್ಣಪ್ಪ, ಕೆ.ಎನ್. ನಾಗರಾಜ್, ವಿ. ಮಂಜುನಾಥರೆಡ್ಡಿ, ಜೆ.ಕಾಂತರಾಜ್,ವೈ.ಬಿ. ಅಶ್ವಥನಾರಾಯಣ,ಡಿ.ವಿ. ಹರೀಶ್, ಆರ್.ಶ್ರೀನಿವಾಸ್, ಎನ್.ಸಿ. ವೆಂಕಟೇಶ್, ಎನ್. ಹನುಮೇಶ್, ಕಾಂತಮ್ಮ,ಎಸ್.ವಿ. ಸುಬ್ಬಾರೆಡ್ಡಿ, ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಎಸ್. ಜಗದೀಶ್ ಕುಮಾರ್, ಕೆಎಂಎಫ್ ಪ್ರತಿನಿಧಿ ಎನ್.ಮುನಿರೆಡ್ಡಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ವಿ. ತಿಪ್ಪಾರೆಡ್ಡಿ ಉಪಸ್ಥಿತರಿದ್ದರು.

ಹಾಲಿನ ಖರೀದಿ ದರ ಹೆಚ್ಚಳದಿಂದ ಉತ್ಪಾದಕರಿಗೆ ಕೊಂಚ ಮಟ್ಟಿಗೆ ಸಹಾಯವಾಗಲಿದೆ, ಸುಗ್ಗಿ ಸಂದರ್ಭದಲ್ಲಿ ಈ ಕ್ರಮ ಅನಿವಾರ್ಯ, ಹಾಲು ಖರೀದಿ ದರ ಹೆಚ್ಚಳಕ್ಕೆ ಮುಂಚೆಯೇ ನಿರ್ಧರಿಸಲಾಗಿತ್ತು. ತುರ್ತು ಸಭೆಯಲ್ಲಿ ಅಧಿಕೃತ ಘೋಷಣೆ ಮಾಡಲಾಗಿದೆ. ರಾಜ್ಯದ ಇನ್ನಿತರ ಹಾಲು ಒಕ್ಕೂಟಕ್ಕಿಂತ ನಾವು ಹಾಲು ಉತ್ಪಾದಕರಿಗೆ ಹೆಚ್ಚಿನ ನೆರವು ಕಲ್ಪಿಸುತ್ತಿದ್ದೇವೆ.

ಕೆ.ವೈ.ನಂಜೇಗೌಡ, ಅಧ್ಯಕ್ಷ, ಜಿಲ್ಲಾ ಹಾಲು ಒಕ್ಕೂಟ, ಕೋಲಾರ

ಹಾಲು ಖರೀದಿ ದರ ಹೆಚ್ಚಳ ವಿಚಾರ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ಆಯಿತು. 2 ರೂ. ಹೆಚ್ಚಳ ಸಮಾಧಾನ ತಂದಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರ ನೆರವಿಗೆ ಕೆಎಂಎಫ್ ಅಗತ್ಯ ನೆರವು ನೀಡಬೇಕು, ಪಶು ಆಹಾರ ದರ ಹೆಚ್ಚಳ ಆಗದಂತೆ ನೋಡಿಕೊಳ್ಳಬೇಕು.

ಡಿ.ವಿ.ಹರೀಶ್, ನಿರ್ದೇಶಕ, ಕೋಲಾರ ತಾಲೂಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net