

ಚಿತ್ರದುರ್ಗ: ಹಾಲು ಉತ್ಪಾದಕರ ಸಹಕಾರ ಸಂಘಗಳು ಗುಣಮಟ್ಟ ಕಾಪಾಡಿಕೊಂಡಾಗ ಉತ್ತಮ ದರ ನೀಡಲು ನೆರವಾಗಲಿದೆ ಎಂದು ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟದ ನಿರ್ದೇಶಕ ಜಿ.ಪಿ.ರೇವಣಸಿದ್ದಪ್ಪ ತಿಳಿಸಿದರು.
ನಗರದ ಹಾಲು ಉತ್ಪಾದಕರ ಶಿಥಲೀಕರಣ ಕೇಂದ್ರದಲ್ಲಿ ಸೋಮವಾರ ಜಿಲ್ಲೆಯ 37 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಗಣಕಯಂತ್ರ, ಯುಪಿಎಸ್, ಹಾಲಿನ ಗುಣಮಟ್ಟದ ಮಾಹಿತಿ ನೀಡುವ ಸ್ವಯಂ ಚಾಲಿತ ಯಂತ್ರ ವಿತರಿಸಿ ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳು ಶೇಖರಿಸುವ ಮಿಲ್ಕ್ ಪರಿಶ್ರಮದಿಂದ ಕೂಡಿದೆ. ಹೀಗಾಗಿ ಸಂಘಗಳ ಜೊತೆಗೆ ಧ್ವನಿಯಾಗಿ ಇರುತ್ತೇವೆ ಎಂದು ಭರವಸೆ ನೀಡಿದರು.
ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಜಿ.ಬಿ.ಶೇಖರ್ ಮಾತನಾಡಿ, ಸಂಘಗಳಿಗೆ ಗ್ರೇಡ್ ಮೇಲೆ ದರ ನಿಗದಿಪಡಿಸಿದರೆ ರೈತರಿಗೆ ಮೋಸವಾಗುವುದಿಲ್ಲ. ಜೊತೆಗೆ ಕಾರ್ಯದರ್ಶಿಗಳು ಕೆಲಸ ಮಾಡಲು ಸುಲಭವಾಗುತ್ತದೆ. ಅಲ್ಲದೆ, ಒಕ್ಕೂಟದ ಸದಸ್ಯರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಹಾಲು ಒಕ್ಕೂಟದ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ, ಹಾಲು ಶಿಥಲೀಕರಣ ಕೇಂದ್ರದ ಸಹಾಯಕ ವ್ಯವಸ್ಥಾಪಕ ಡಾ.ಮುಕುಂದನಾಯ್ಕ ಇತರರಿದ್ದರು.