ಹಾಲು ಉತ್ಪಾದಕರಿಗೆ ಹೆಚ್ಚಿಗೆ ಸಿಕ್ಕಿದ್ದು ೫೦ಪೈಸೆ ಮಾತ್ರ!

kolar milk union
ಕೋಲಾರ - ಚಿಕ್ಕಬಳ್ಳಾಪುರ ಹಾಲು ಒಕ್ಕೂಟ
Published on

ಕೋಲಾರ ಕೋಲಾರ - ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ರಾಜ್ಯ ಸರ್ಕಾರ ಲೀಟರ್ ನಂದಿನಿ ಹಾಲಿನ ಮಾರಾಟ ದರವನ್ನು ೩ ಹೆಚ್ಚಿಸಿದ ಬೆನ್ನಲ್ಲೇ ಅದನ್ನು ರೈತರಿಗೆ ವರ್ಗಾಯಿಸಿ ಖರೀದಿ ದರವನ್ನು ೩ ರೂ. ಹೆಚ್ಚಿಸಿದೆ. ಆದರೆ, ಅವಿಭಜಿತ ಕೋಲಾರ ಜಿಲ್ಲೆಯ ಹೈನುಗಾರರಿಗೆ ಕೇವಲ ೫೦ ಪೈಸೆ ಮಾತ್ರ ಲಾಭವಾದಂತಾಗಿದೆ.
ಏಕೆಂದರೆ, ಮಾರಾಟ ದರ ಹೆಚ್ಚಳವಾಗುವ ಅರಿವಿದ್ದ ಒಕ್ಕೂಟದ ಆಡಳಿತ ಮಂಡಳಿ ಜು.೫ರಂದು ನಡೆದಿದ್ದ ಸಭೆಯಲ್ಲಿ ರೈತರಿಂದ ಖರೀದಿಸುವ ಹಾಲಿನ ದರ ಲೀಟರ್‌ಗೆ ೨.೫೦ರೂ. ಕಡಿತಗೊಳಿಸಿತ್ತು. ಇದರಿಂದಾಗಿ ಹಾಲು ಉತ್ಪಾದಕರಿಗೆ ೩೩.೯೦ ರೂ.ಬದಲಿಗೆ ೩೧.೪೦ ಸಿಗುತಿತ್ತು. ಈಗ ೩ ಹೆಚ್ಚಳ ಮಾಡಿರುವುದರಿಂದ ೩೪.೪೦ ಸಿಗುತ್ತಿದೆ. ಅಂದರೆ ಲಾಭ ಕೇವಲ ೫೦ ಪೈಸೆ ಮಾತ್ರ.
ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಒಕ್ಕೂಟದ ದ್ವಿತೀಯ ಆಡಳಿತ ಮಂಡಲಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಆ.೧ರ ಬೆಳಗ್ಗೆಯಿಂದಲೇ ಜಾರಿಗೆ ಬರುವಂತೆ ಖರೀದಿ ದರವನ್ನೂ ೩ ರೂ. ಹೆಚ್ಚಿಸಲಾಗಿದೆ. ಉತ್ಪಾದಕರಿಗೆ ೩೪.೪೦ ರೂ. ಮತ್ತು ಡೇರಿಗಳಿಗೆ ೩೫.೮೫ ರೂ. ಪಾವತಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಈ ಹಿಂದೆ ಸರ್ಕಾರ ೨ ರೂ. ಹೆಚ್ಚಿಸಿದ್ದು, ಒಕ್ಕೂಟದ ಲಾಭಾಂಶದ ೨ರೂ ಸೇರಿಸಿ ಹೆಚ್ಚುವರಿಯಾಗಿ ೪ ರೂ.ಗಳನ್ನು ಮಾರ್ಚ್ ೧೬ರಿಂದ ಜುಲೈ ೨೩ರವರೆಗೆ ಉತ್ಪಾದಕರಿಗೆ ಪಾವತಿಸಲಾಗಿದೆ. ಈ ಅವಧಿಯಲ್ಲಿ ೨೪ ಕೋಟಿ ರೂ. ಪಾವತಿಯಾಗಿದೆ ಎಂದು ಕೆ.ವೈ.ನಂಜೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟೆಂಡರ್ ಆಹ್ವಾನ: ಇನ್ನು ಒಕ್ಕೂಟದ ಎಂ.ವಿ.ಕೆ.ಗೋಲ್ಡನ್ ಡೇರಿಯನ್ನು ೧೮೫ ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದ್ದು, ಈಗಾಗಲೇ ಅಂದಾಜು ೪೯ ಕೋಟಿ ವೆಚ್ಚದಲ್ಲಿ ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. ಶೀಘ್ರ ಟೆಂಡರ್ ಅಂತಿಮಗೊಳಿಸಿ ಕಾಮಗಾರಿ ಪ್ರಾರಂಭಿಸಲು ಸಭೆಯಲ್ಲಿ ನಿರ್ಧಾರಿಸಲಾಯಿತು. ವಿವಿಧ ಯೋಜನೆಗಳಿಗೆ ಒಕ್ಕೂಟದಲ್ಲಿ ಮೂಲ ಸೌಕರ್ಯ ನಿಧಿ ಅಡಿ ೨೦೦ ಕೋಟಿ ಹಣ ಮೀಸಲಿರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೋಲಾರ್ ಘಟಕ: ಒಕ್ಕೂಟದ ವ್ಯಾಪ್ತಿಯ ಮುಖ್ಯಡೇರಿ, ಮೆಗಾಡೇರಿ ಮತ್ತು ಶೀತಲ ಕೇಂದ್ರಗಳ ದೈನಂದಿನ ನಿರ್ವಹಣೆಗೆ ಅಗತ್ಯವಿರುವ ವಿದ್ಯುತ್‌ಗೆ ತಿಂಗಳಿಗೆ ಅಂದಾಜು ೧.೨೫ ಕೋಟಿ ರೂ. ಬಿಲ್ಲು ಪಾವತಿ ಮಾಡಲಾಗುತ್ತಿದೆ. ಈ ವೆಚ್ಚವನ್ನು ಕಡಿಮೆ ಮಾಡಲು ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕೋಚಿಮುಲ್‌ಗೆ ಹೊಳಲಿ ಗ್ರಾಮದಲ್ಲಿ ಮಂಜೂರು ಮಾಡಿದ್ದ ೫೦ ಎಕರೆ ಜಾಗದಲ್ಲಿ ಆತ್ಯಾಧುನಿಕ ಸೋಲಾರ್ ಘಟಕವನ್ನು ಅಂದಾಜು ೬೦ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಐಸ್‌ಕ್ರೀಂಗೆ ಬೇಡಿಕೆ: ನಂದಿನಿ ಐಸ್ ಕ್ರೀಂಗೆ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ಬೇಡಿಕೆ ಇದ್ದು, ಚಿಂತಾಮಣಿ ಶೀತಲ ಕೇಂದ್ರದಲ್ಲಿ ೪೫ ಕೋಟಿ ರೂ. ವೆಚ್ಚದ ಆಧುನಿಕ ತಂತ್ರಜ್ಞಾನದ ಐಸ್‌ಕ್ರೀಂ ಘಟಕ ಸ್ಥಾಪಿಸಲು ಸಭೆ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ನಿರ್ದೇಶಕರಾದ ಜಯಸಿಂಹಕೃಷ್ಣಪ್ಪ, ಕೆ.ಎನ್.ನಾಗರಾಜ್, ಮಂಜುನಾಥರೆಡ್ಡಿ, ಜೆ.ಕಾಂತರಾಜ್, ವೈ.ಬಿ.ಅಶ್ವಥನಾರಾಯಣ, ಡಿ.ವಿ.ಹರೀಶ್, ಎನ್.ಸಿ.ವೆಂಕಟೇಶ್, ಆರ್.ಶ್ರೀನಿವಾಸ್, ಆದಿನಾರಾಯಣರೆಡ್ಡಿ, ಸುನಂದಮ್ಮ, ಕಾಂತಮ್ಮ, ಪಶು ಸಗೋಪನೆ ಇಲಾಖೆ ಉಪನಿರ್ದೇಶಕ ಡಾ.ಜಿ.ಟಿ.ರಾಮಯ್ಯ, ಸಹಕಾರ ಸಂಘಗಳ ಉಪ ನಿಬಂಧಕ ಶಂಕರ್, ಕಹಾಮ ಪ್ರತಿನಿಧಿ ಡಾ.ಪಿ.ಬಿ.ಸುರೇಶ್ ಹಾಗೂ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ ಇದ್ದರು.

ಇಂಡಿ, ಬೂಸಾ ದುಭಾರಿ!
ಕೋಲಾರ * ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಲೀಟರ್ ಹಾಲು ಖರೀದಿ ದರ ೨.೫೦ ರೂ.ಇಳಿಕೆ ಮಾಡದಿದ್ದರೆ, ಉತ್ಪಾದಕರಿಗೆ ೩೬.೯೦ಪೈಸೆ ಸಿಗುತ್ತಿತ್ತು. ಆದರೆ ಒಕ್ಕುಟದ ಆಡಳಿತ ಜಾನ ನಡೆ ಅನುಸರಿಸಿದ್ದು, ಸರ್ಕಾರ ದರಹೆಚ್ಚಿಸಿದ್ದು ಮತ್ತು ಅದರ ಜತೆಗೆ ೫೦ಪೈಸೆ ಮಾತ್ರ ಹೆಚ್ಚಿಗೆ ರೈತರಿಗೆ ಸಿಗುವಂತಾಗಿದೆ. ಪ್ರಮುಖವಾಗಿ ಪಶು ಆಹಾರವಾದ ೩೦ಕೆಜಿ ನೆಲಗಡಲೆ ಇಂಡಿ ತಿಂಗಳ ಹಿಂದೆ ೧೨೦೦ರೂ. ಇದ್ದಿದ್ದು ಪ್ರಸ್ತುತ ೧೫೫೦ರೂ.ಗೆ ಏರಿಕೆಯಾಗಿದೆ. ಬೂಸ ೧೨೦೦ ರೂ.ಇದ್ದುದ್ದು, ೧೪೫೦ರೂ.ಏರಿಕೆಯಾಗಿದೆ. ೧೫ದಿನಕ್ಕೆ ಹಸುವಿಗೆ ೩ಸಾವಿರ ರೂ. ಆಹಾರ, ೨ಸಾವಿರ ರೂ.ಮೇವು ಕೊಡಬೇಕಿದ್ದು, ಉತ್ತಮ ತಳಿಯ ಹಸು ಕೊಡುವ ಹಾಲು ಮಾರಾಟದಿಂದ ೧೫ದಿನಕ್ಕೆ ೫ಸಾವಿರ ರೂ.ಮತ್ರ ಸಿಗುತ್ತದೆ. ಹೀಗಾಗಿ ಒಕ್ಕೂಟ, ಸರ್ಕಾರ ಕೊಡುವ ಹಾಲಿನ ದರ ರೈತನಿಗೆ ಲಾಭದಾಯಕವಲ್ಲ. ಒಕ್ಕೂಟ ೨.೫೦ ರೂ.ಇಳಿಕೆ ಮಾಡಿದ್ದು ಸರಿಯಲ್ಲ ಎಂಬ ಅಭಿಪ್ರಾಯ ರೈತಪಿ ವಲಯದಿಂದ ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net