ಹಾಲು ಉತ್ಪಾದಕರಿಗೆ ಜೀವ ವಿಮೆ

18manju2
Published on

ಬೆಳಗಾವಿ: ಪ್ರಪ್ರಥಮ ಬಾರಿಗೆ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು-ಉತ್ಪಾದಕರ ಸಂಘಗಳ ಒಕ್ಕೂಟ (ಬೆಮುಲ್) ವತಿಯಿಂದ ಹಾಲು ಉತ್ಪಾದಕ ರೈತರಿಗೆ 1 ಲಕ್ಷ ರೂ.ವರೆಗೆ ಜೀವ ವಿಮೆ ಮಾಡಿಸುವ ಯೋಜನೆ ಹಾಕಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಎಮ್ಮೆ ಹಾಲಿನ ದರ ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

ನಗರದ ಗಾಂಧಿಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದ್ಯ ಜಿಲ್ಲೆಯ ಬೆಮುಲ್ ವ್ಯಾಪ್ತಿಯಲ್ಲಿ 35 ಸಾವಿರ ಹಾಲು ಉತ್ಪಾದಕ ರೈತರಿದ್ದು, ಅವರಿಗೆ ಸಕಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅಕಾಲಿಕ ಮರಣ ಹೊಂದುವ ಹಾಲು ಉತ್ಪಾದಕ ರೈತರಿಗೆ 5ರಿಂದ 10 ಸಾವಿರ ರೂ.ವರೆಗೆ ಪರಿಹಾರ ನೀಡಲಾಗುತ್ತಿದ್ದು, ಜೀವ ವಿಮೆ ಕೂಡ ಮಾಡಿಸುತ್ತಿದ್ದೇವೆ. ಇದಕ್ಕಾಗಿ ವಾರ್ಷಿಕ 50ರಿಂದ 60 ಲಕ್ಷ ರೂ. ವಿಮಾ ಕಂತನ್ನೂ ಒಕ್ಕೂಟವೇ ಭರಿಸಲಿದೆ ಎಂದರು.

ಬೆಮುಲ್ ಎಮ್ಮೆ ಹಾಲಿಗೆ ಬೆಳಗಾವಿ, ಮಹಾರಾಷ್ಟ್ರದ ಪುಣೆ, ಮುಂಬೈಯಲ್ಲಿ ಮಾತ್ರ ಬೇಡಿಕೆ ಇದೆ. ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಹಸುವಿನ ಹಾಲಿಗೆ ಬೇಡಿಕೆಯಿದ್ದು, ಎಮ್ಮೆ ಹಾಲಿನ ದರ ಹೆಚ್ಚಿಸುವ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು. ಹಸುವಿನ ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯ 2.50 ಲಕ್ಷ ಲೀಟರ್ ಹಾಲು ಶೇಖರಿಸಲಾಗುತ್ತಿದ್ದು, ಮುಂದಿನ ವರ್ಷಕ್ಕೆ 3 ಲಕ್ಷ ಲೀಟರ್‌ಗೆ ಹೆಚ್ಚಿಸುವ ಗುರಿ ಹಾಕಿಕೊಂಡಿದ್ದೇವೆ ಎಂದರು.

ಜಿಲ್ಲೆಯಲ್ಲಿ ವಿತರಣೆ ಆಗುತ್ತಿರುವ ಪಶು ಆಹಾರ ಗುಣಮಟ್ಟ ಕುರಿತು ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ರಸಾಯನಿಕ ಪದಾರ್ಥ ಮಿಶ್ರಿತ ಪಶು ಆಹಾರ ಖರೀದಿಸಬೇಡಿ. ಕೆಎಂಎಫ್‌ನಿಂದಲೇ ಪಶು ಆಹಾರ ಖರೀದಿಸಿ. ಇದರ ದರ ಕಡಿಮೆ ಮಾಡುವ ಕುರಿತು ಸೆ.26ರಂದು ಬೆಂಗಳೂರಿನಲ್ಲಿ ಜರುಗಲಿರುವ ಕೆಎಂಎಫ್ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು. ಆಹಾರದ ಗುಣಮಟ್ಟ ಪರಿಶೀಲನೆಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ಬೆಮುಲ್ ವಾರ್ಷಿಕ 13 ಕೋಟಿ ರೂ. ಲಾಭದಲ್ಲಿ 2 ಕೋಟಿ ರೂ. ಕಟ್ಟಡಗಳ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಮೇವು ಕಟಾವು ಯಂತ್ರ, ಹಾಲು ಶೇಖರಣೆ ಘಟಕ, ಡಿಸೇಲ್ ಯಂತ್ರಗಳು ಸೇರಿ ವಿವಿಧ ಸಲಕರಣೆ ಖರೀದಿಸಿ ರೈತರಿಗೆ ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗಾವಿ ಹಾಲು ಒಕ್ಕೂಟ ನಂ.1 ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡತ್ತೇವೆ ಎಂದರು. ಹಾಲಿ ದರ ಹೆಚ್ಚಳ ಮಾಡಿರುವುದರಿಂದ ಹೆಚ್ಚಿನ ಲಾಭ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಕಳೆದ ಸಾಲಿನಲ್ಲಿ ಲೀಟರ್ ಹಾಲಿನಲ್ಲಿ 2 ರೂ. ದರ ಕಡಿಮೆ ಮಾಡಿದ್ದರಿಂದ ಆದಾಯಕ್ಕೆ ಹೊಡೆತ ಬಿದ್ದಿತ್ತು ಎಂದು ಹೇಳಿದರು. ಬೆಮುಲ್ ನಿರ್ದೇಶಕರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆನ್ನವರ, ಡಾ.ಬಸವರಾಜ ಪರವನ್ನವರ, ಬಾಬುರಾವ್ ವಾಘಮೋಡೆ, ವಿರೂಪಾಕ್ಷ ಈಟಿ, ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಕಾಂತ ವಿ.ಎನ್. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net