ಹಾಲಿನ ಪ್ರೋತ್ಸಾಹಧನ ಬಿಡುಗಡೆಗೆ ಬಿಜೆಪಿ ಪಟ್ಟು

0000
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಹಾಲಿನ ದರ ಏರಿಕೆ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿ ತಾಲೂಕು ಕಚೇರಿ ಮುಂಭಾಗ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಹಸುಗಳೊಂದಿಗೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಲೆ ಏರಿಕೆಯಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಮೇಲೆ ದುಷ್ಪರಿಣಾಮ ಬೀರುವ ಈ ನೀತಿಯನ್ನು ಸರ್ಕಾರ ಬದಲಾಯಿಸಿಕೊಳ್ಳಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸ್ಥಗಿತಗೊಂಡಿರುವ ಕಿಸಾನ್ ಸಮ್ಮಾನ್ ನಿಧಿಯಡಿ, ರೈತರಿಗೆ 4 ಸಾವಿರ ರೂ. ಆರ್ಥಿಕ ನೆರವನ್ನು ನೀಡಲು ಸರ್ಕಾರ ಮುಂದಾಗಬೇಕು. 8 ತಿಂಗಳಿನಿಂದ 957 ಕೋಟಿ ರೂ. ಹಾಲಿನ ಬಾಕಿಯಿದ್ದು, ರೈತರ ಹಿತದೃಷ್ಟಿಯಿಂದ ಅದನ್ನು ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಬೃಂಗೇಶ್ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಜ್ವರ ಬಂದರೆ, ರಾಜ್ಯದ ಜನತೆಗೆ ಬರೆ ಹಾಕ್ತಿದೆ. ಇದು ಬರೆ ಹಾಕುವ ಸರ್ಕಾರ. ಜನ ವಿರೋಧಿ ಸರ್ಕಾರ. ನೀವು ಹಾಲಿನ ಬೆಲೆ ಹೆಚ್ಚಳ ಮಾಡಿದ್ದಕ್ಕೆ ಕಾಫಿ, ಟೀ ಬೆಲೆಗಳೂ ಅಧಿಕವಾಗುತ್ತದೆ. ಇದು ಎಲ್ಲರ ಮೇಲೆ ಪರಿಣಾಮ ಬೀರುತ್ತದೆ. ಡಿಸೇಲ್, ಪೆಟ್ರೋಲ್ ದರವನ್ನೂ ಹೆಚ್ಚಳ ಮಾಡಿದ್ದಾರೆ. ಇದರಿಂದ ಸರಕು ಸಾಗಣೆ ಬೆಲೆ ಹೆಚ್ಚಳವಾಗಿದೆ. ಸರ್ಕಾರ ರಾಜ್ಯದ ಜನರ ಜೀವನದ ಮೇಲೆ ಚಲ್ಲಾಟವಾಡುತ್ತಿದೆ. ನೀವು ಬೆಲೆ ನಿಯಂತ್ರಣ ಮಾಡುವುದಾಗಿ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದು, ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಕೆ ಮಾಡಬೇಕು. ಸರ್ಕಾರಕ್ಕೆ ಮನುಷ್ಯತ್ವ ಇದ್ದರೆ ಬೆಲೆಗಳನ್ನು ಇಳಿಕೆ ಮಾಡಿ. ಇನ್ನು ಸಿದ್ದರಾಮಯ್ಯ ದೀನದಲಿತರ ಪರ ಎನ್ನುತ್ತಿದ್ದರು. ಆದರೆ, ಈ ಸರ್ಕಾರ ದೀನ-ದಲಿತರ ಪರ ಇಲ್ಲ.
ಈ ಸರ್ಕಾರ ವಿದ್ಯಾರ್ಥಿಗಳು, ರೈತರ ಖಾತೆಗೆ ಹಣ ಹಾಕಿಲ್ಲ. ಯಾರ ಖಾತೆಗೆ ಹಾಕಿದ್ರೆ ತನಗೆ ವಾಪಸ್ ಕೊಡುತ್ತಾರೆ, ಅಂತಹವರ ಖಾತೆಗೆ ಹಣ ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net