ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡದಿದ್ದರೇ ಹೋರಾಟ

Honnur Basavanna
Published on

ಚಾಮರಾಜನಗರ: ಚಾಮುಲ್‌ನಿಂದ ರೈತರಿಗೆ ನೀಡಬೇಕಿರುವ ಹಾಲಿನ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡದಿದ್ದರೇ ಚಾಮುಲ್ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರ ವಿರುದ್ಧ ಮೊಟ್ಟೆ ಹೊಡೆಯುವ ಚಳುವಳಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಎಚ್ಚರಿಕೆ ನೀಡಿದರು.

ಕಳೆದ 8 ತಿಂಗಳಿನಿಂದಲೂ ರೈತರಿಗೆ ಬರಬೇಕಿದ್ದ 30 ಕೋಟಿ ರೂ, ಹಾಲಿನ ಪ್ರೋತ್ಸಾಹ ಧನವನ್ನು ನೀಡದೇ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಕಳೆದ ತಿಂಗಳಿನಿಂದ ರೈತರಿಂದ ಪಡೆಯುವ ಪ್ರತಿ ಲೀಟರ್ ಹಾಲಿಗೆ 1 ರೂ, ಕಡಿತ ಮಾಡಲಾಗಿದೆ. ಇದರಿಂದ ರೈತರಿಗೆ ಸುಮಾರು 1.50 ಕೋಟಿ ರೂ, ನಷ್ಟವಾಗಿದೆ. ಈ ನಿಟ್ಟಿನಲ್ಲಿ ಜ.1 ರವರೆಗೆ ರೈತರಿಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಇಲ್ಲವಾದರೇ ಚಾಮುಲ್ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯಲ್ಲಿ ಚಾಮುಲ್ ಪ್ರಾರಂಭವಾಗುವಾಗ ಸರ್ಕಾರದಿಂದ 83 ಕೋಟಿ ರೂ, ಅನುದಾನ ಬಿಡುಗಡೆಯಾಗಿತ್ತು. ಆದರೇ ಇಂದಿಗೂ 53 ಕೋಟಿ ರೂ, ಅನುದಾನ ಕೊಡುವುದು ಬಾಕಿಇದೆ. ಆದರೇ ಚಾಮುಲ್ ಆಡಳಿತ ಮಂಡಳಿ ಬ್ಯಾಂಕ್‌ಗಳಿಂದ 50 ಕೋಟಿ ಸಾಲಪಡೆದು ತಿಂಗಳಿಗೆ ಸುಮಾರು 27 ಲಕ್ಷ ರೂ, ಬಡ್ಡಿ ತೆರುತ್ತಿದೆ. ಚಾಮುಲ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಮನ್ವಯದ ಕೊರತೆಯಿಂದ ಚಾಮುಲ್ ನಷ್ಟ ಅನುಭವಿಸುವಂತಾಗಿದ್ದು, ರೈತರು ಕೂಡ ಸಂಕಷ್ಟಕ್ಕೆ ಸಿಲಿಕುವಂತಾಗಿದೆ ಎಂದರು.

ಜಿಲ್ಲಾ ಉಸ್ತವಾರಿ ಸಚಿವ ಕೆ.ವೆಂಕಟೇಶ್ ಅವರು ಪಶುಸಂಗೋಪನಾ ಸಚಿವರಾಗಿದ್ದರೂ, ಜಿಲ್ಲೆಯಲ್ಲಿ ಹೈನುಗಾರಿಕೆ ನಂಬಿಕೊಂಡಿರುವ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಲರಾಗಿದ್ದಾರೆ. ಅವರು ಮಂತ್ರಿಸ್ಥಾನಕ್ಕೆ ಯೋಗ್ಯವಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ. ಈ ಕಾರಣಕ್ಕೆ ಸಚಿವರು ಜಿಲ್ಲೆಗೆ ಬಂದಾಗ ಕಪ್ಪುಬಾವುಟ ಪ್ರದರ್ಶಿಸಿ, ಮೊಟ್ಟೆ ಹೊಡೆಯುವ ಚಳುವಳಿಯನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪುಟ್ಟೇಗೌಡ, ತಾಲೂಕು ಅಧ್ಯಕ್ಷ ಮಹದೇವಸ್ವಾಮಿ, ಪದಾಧಿಕಾರಿಗಳಾದ ಅಶೋಕ್, ಮಹದೇವಸ್ವಾಮಿ, ಮೂರ್ತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net