

ಚಾಮರಾಜನಗರ: ಚಾ.ನಗರ ಹಾಲು ಉತ್ಪಾದಕರ ಒಕ್ಕೂಟ (ಚಾಮುಲ್) ರೈತರಿಂದ ಖರೀದಿಸುವ ಹಾಲಿನ ದರವನ್ನು ನ.11 ರಿಂದ 1 ರೂ. ಕಡಿತಗೊಳಿಸಲು ಮುಂದಾಗಿರುವುದು ಸರಿಯಾದ ನಡೆಯಲ್ಲ ಎಂದು ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಖಂಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರೈತರು ಹಾಲು ಉತ್ಪಾದಿಸಲು ಪಶು ಆಹಾರ ದರ, ಮೇವಿನ ದರ, ಕೂಲಿ ವೆಚ್ಚ ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚಾಗಿದೆ. ಇದೆಲ್ಲದರ ನಡುವೆಯೂ ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿ ಧೃತಿಗೆಡದೆ ಹಾಲು ಉತ್ಪಾದನೆ ಮಾಡುತ್ತಿದ್ದಾನೆ. ಚಾಮುಲ್ ಹಾಲು ಖರೀದಿ ದರವನ್ನು ಕಡಿಮೆಗೊಳಿಸಿದರೆ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ಹೇಳಿದರು.
ಈ ನಿಟ್ಟನಲ್ಲಿ ರೈತರ ಪರವಾಗಿ ಇರಬೇಕಾದ ಚಾಮುಲ್ ಆಡಳಿತ ಮಂಡಳಿಯು ರೈತ ವಿರೋಧಿ ನಿಲುವನ್ನು ತೆಗೆದುಕೊಂಡಿದೆ. ಆಗಾಗಿ ಈ ನಿಲುವನ್ನು ಖಂಡಿಸಿ ನ.12 ರಂದು ಕುದೇರು ಹಾಲು ಒಕ್ಕೂಟದ ಮುಂಭಾಗ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್, ಸಂಘಟನಾ ಕಾರ್ಯದರ್ಶಿ ವಿಜಯ್‌ಕುಮಾರ್, ಮಂಜು ಬದನಗುಪ್ಪೆ, ಅಶೋಕ್, ಮಹದೇವಸ್ವಾಮಿ, ಗುಂಡು ಕೆಲ್ಲಂಬಳ್ಳಿ ಹಾಗೂ ಇತರರು ಹಾಜರಿದ್ದರು.