

ಚಾಮರಾಜನಗರ: ರೈತರ ಹೆಸರಿನಲ್ಲಿ ಗ್ರಾಹಕ ಖರೀದಿಸುವ ಹಾಲಿನ ದರವನ್ನು ಏರಿಸುವ ಮೂಲಕ ರಾಜ್ಯಸರ್ಕಾರ ರೈತರು ಮತ್ತು ಗ್ರಾಹಕರಿಗೆ ವಂಚನೆ ಮಾಡುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಆಡ್ಯ ರಮೇಶ್‌ರಾಜ್ ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ಉತ್ಪಾದಿತ ಪ್ರತಿ ಲೀಟರ್ ಹಾಲಿನ ದರವನ್ನು 2 ರೂ, ಇಳಿಸಿ, ಈಗ ರೈತರ ಹೆಸರಿನಲ್ಲಿ ಗ್ರಾಹಕ ಖರೀದಿಸುವ ಹಾಲಿನ ದರವನ್ನು 4 ರೂ, ಏರಿಸುವ ಮೂಲಕ ನಾಟಕವಾಡುತ್ತಿದೆ. ಕಳೆದ 20 ತಿಂಗಳಿಂದ 3 ಬಾರಿ ಹಾಲಿನ ದರವನ್ನು ಸುಮಾರು 9 ರೂ, ನಷ್ಟು ಏರಿಕೆ ಮಾಡಲಾಗಿದೆ. ಆದರೆ ರೈತ ಉತ್ಪಾದಿತ ಹಾಲಿಗೆ 4 ರೂ, ಹೆಚ್ಚಳ ಮಾಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರೈತರಿಂದ ಹಾಲು ಖರೀದಿಸಿ, ಗ್ರಾಹಕರಿಗೆ ಮಾರಾಟ ಮಾಡುವ ಹಂತದವರೆಗೆ ಕೆಎಂಎ್ ಆಪರೇಟಿಂಗ್ ಸಿಸ್ಟಮ್ ಖರ್ಚು ಶೇ.60 ರಷ್ಟಿದೆ. ಹೊರ ರಾಜ್ಯದ ಖಾಸಗಿಯವರಿಗೆ ಶೇ.10 ರಷ್ಟು ಮಾತ್ರ ಖರ್ಚು ತಗಲುತ್ತಿದೆ. ಕೆಎಂಎ್ ಮತ್ತು ಹಾಲು ಮಹಾಮಂಡಳಿ ಆಪರೇಟಿಂಗ್ ವೆಚ್ಚವನ್ನು ದುಬಾರಿ ತೋರಿಸಿ ರೈತರು ಮತ್ತು ಗ್ರಾಹಕರಿಗೂ ವಂಚನೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್, ಪ್ರಧಾನ ಕಾರ್ಯದರ್ಶಿ ಬೋಸ್, ಕೋಶಾಧ್ಯಕ್ಷ ಯಲಕ್ಕೂರು ಲಿಂಗರಾಜು, ಜಿಲ್ಲಾ ಕಾರ್ಯಕಾರಣಿ ಸದಸ್ಯ ಮಣೀಗಾರ್ ಪ್ರಸಾದ್, ಮಹೇಶ್ ಹಾಜರಿದ್ದರು.
ವಕ್ಫಬಿಲ್ ಮಂಡನೆಗೆ ಸ್ವಾಗತ:
ಕೇಂದ್ರ ಬಿಜೆಪಿ ಸರ್ಕಾರ ವಕ್ಫ ಬಿಲ್ ಅನ್ನು ಮಂಡಿಸಿರುವುದನ್ನು ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಸ್ವಾಗತಿಸಿದರು. ಕಾಂಗ್ರೆಸ್ ಮತ್ತು ಇನ್ನಿತರೆ ಮಿತ್ರಪಕ್ಷಗಳು ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಸಂವಿಧಾನ ಮತ್ತು ರೈತ ವಿರೋಧಿ ವಕ್ಫಕಾಯ್ದೆಗೆ ಹಲವು ತಿದ್ದುಪಡಿಗಳನ್ನು ತರುವ ಮೂಲಕ ವಂಚನೆ ಮಾಡಿತ್ತು. ವಕ್ಫ ಕಾಯ್ದೆಗೆ ತಿದ್ದುಪಡಿ ಬಿಲ್‌ಅನ್ನು ಸಂಸತ್ತಿನಲ್ಲಿ ಮಂಡನೆ ಮಾಡುವ ಮೂಲಕ ಬಿಜೆಪಿ ಸರ್ಕಾರ ರೈತಪರವಾದ ನಿಲುವನ್ನು ತೋರಿಸಿದೆ ಎಂದು ಹೇಳಿದರು.