

ಚಿತ್ರದುರ್ಗ:ಹಾಲಿನ ಪೂರೈಕೆ ಪ್ರಮಾಣದಲ್ಲಿ ಆಗಿರುವ ಹೆಚ್ಚಳದಿಂದಾಗಿ,ಮಾರಾಟದಲ್ಲೂ ಹಾಲಿನ ಪ್ರಮಾಣ ಹೆಚ್ಚಿಸಿ ಅದಕ್ಕೆ ಪೂರಕವಾಗಿ ದರ ಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಹಿಂದೆ ಬಿಜೆಪಿ ಆಡಳಿತಾವಧಿ ದರ ಏರಿಕೆ ಆಗಿರಲಿಲ್ಲವೇ ? ಹಾಲು, ಆಲ್ಕೋಹಾಲ್ ಬೆಲೆ ಏರಿಕೆಯಾಗಿದೆ ಎಂಬ ಪ್ರತಿಪಕ್ಷ ನಾಯಕ ಆರ್.ಆಶೋಕ್ ಟೀಕೆಗೆ,ಅಕ್ಕಪಕ್ಕದ ರಾಜ್ಯಗಳಲ್ಲಿ ದರ ಗಮನಿಸಲಿ. ಬೆಲೆ ಏರಿಕೆ ಗಳಿಗೂ ಗ್ಯಾರಂಟಿ ಯೋಜನೆಗೂ ಸಂಬಂಧ ಇಲ್ಲ.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ 5300 ಕೋಟಿ ರೂ.ಅನುದಾನ ತರಲು,ರಾಜ್ಯದ ಕಾಂಗ್ರೆಸ್ಸಿನ 9 ಸದಸ್ಯರು ಪ್ರಯತ್ನಿಸಲಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪರ್ಧಿಸುತ್ತಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿದ್ದು,ಪ್ರತಿ ಕ್ಷೇತ್ರಕ್ಕೂ ಭೇಟಿ ಕೊಡಬಹುದಾಗಿದೆ. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ಗಳನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ಸ್ವೀಕರಿಸಿದೆ ಎಂದರು.