

ಬಳ್ಳಾರಿ : ರಾಜ್ಯ ಸರ್ಕಾರ ಇತ್ತೀಚೆಗೆ ಹಾಲು ಉತ್ಪಾದಕರಿಂದ ಹಾಲಿನ ದರ ಇಳಿಕೆ ಖಂಡಿಸಿ, ನಾಲ್ಕು ಜಿಲ್ಲೆಯ ಹಾಲು ಉತ್ಪಾದಕರು ಸಂಘಟನೆ ಇಲ್ಲಿನ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ (ರಾಬಕೊವಿ) ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘ ಒಕ್ಕೂಟದ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಹಾಲು ಉತ್ಪಾದನೆಯ ರೈತರು ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘ ಒಕ್ಕೂಟದ ಗೇಟ್‌ಗೆ ಬೀಗ ಹಾಕಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಲ್ಲಿ ನಾಲ್ಕು ಜಿಲ್ಲೆಗಳಾದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಉತ್ಪಾದನೆಯ ರೈತರು ಪ್ರತಿಟನೆಯಲ್ಲಿ ಭಾಗಿಯಾಗಿದ್ದರು.
ಹಾಲು ಉತ್ಪಾದಕ ರೈತ ರಮೇಶ ಮಾತನಾಡಿ, ಹಾಲು ಉತ್ಪಾದಕರಿಗೆ ಲೀಟರ್‌ಗೆ ರೂ.1.50 ಪೈಸೆ ದರವನ್ನು ಕಡಿಮೆ ಮಾಡಿದ್ದಾರೆ. ಇದರಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತಿದೆ. ಹಾಲಿನ ದರ ಕಡಿಮೆ ಮಾಡುವ ಬಗ್ಗೆ ತೆಗೆದುಕೊಳ್ಳಲಾದ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಕೆಎಂಎಫ್ ಅಧ್ಯಕ್ಷ ಎಸ್. ಭೀಮ್ ನಾಯ್ಕ ಭೇಟಿ ನೀಡಿ ಮಾತನಾಡಿದರು. ಕಳೆದ ಆ. 29 ರಂದು ನಡೆದ ರಾಬಕೊವಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘ ಒಕ್ಕೂಟದ ಆಡಳಿತ ಮಂಡಳಿಯ ಸಭೆಯಲ್ಲಿ ಹಾಲು ಉತ್ಪಾದಕರಿಗೆ ಲೀ. 1.50 ಪೈಸೆ ರೂ. ದರ ಕಡಿತಗೊಳಿಸಲಾಗಿತ್ತು. ಆದರೆ ಮುಂದಿನ ತಿಂಗಳು ಒಂದನೇ ತಾರೀಖಿನಿಂದ ಹಾಲು ಉತ್ಪಾದಕರಿಗೆ ಲೀಟರ್‌ಗೆ 1.50 ಪೈಸೆ ರೂ. ನೀಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಹಾಲು ಉತ್ಪಾದಕರು ಕೆಎಂಎಫ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿ, ಪ್ರತಿಭಟನೆ ಹಿಂಪಡೆಯಲಾಯಿತು