

ಚಿತ್ರದುರ್ಗ: ಮುಂದಿನ ದಿನಗಳಲ್ಲಿ ಮಾರುಕಟ್ಟೆ ವಿಸ್ತರಿಸುವ ಮೂಲಕ ರೈತರಿಂದ ಖರೀದಿಸುವ ಹಾಲಿಗೆ ಹೆಚ್ಚಿನ ದರ ನೀಡುವ ಚಿಂತನೆ ಇದೆ ಎಂದು ಶಿಮುಲ್ ಅಧ್ಯಕ್ಷ ವಿದ್ಯಾಧರ್ ಹೇಳಿದರು.
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಚಿತ್ರದುರ್ಗ ಜಿಲ್ಲೆ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಕಾರ‌್ಯದರ್ಶಿಗಳ ಪ್ರಾದೇಶಿಕ ಸಭೆ ಉದ್ಘಾಟಿಸಿ ಮಾತನಾಡಿ, ಹೊರ ರಾಜ್ಯಗಳಲ್ಲಿ ನಂದಿನಿ ಹಾಲು ಹಾಗೂ ಇತರೆ ಉತ್ಪನ್ನಗಳ ಮಾರಾಟಕ್ಕೆ ಸಮೀಕ್ಷೆ ನಡೆಸಲಾಗಿದೆ ಎಂದರು.
ಹಾಲಿನ ಪೌಡರ್ ಹಾಗೂ ಬೆಣ್ಣೆ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಒಂದು ಕೆಜಿ ಹಾಲಿನ ಪುಡಿ ತಯಾರಿಕೆ 11 ಲೀಟರ್ ಹಾಲಿನ ಅಗತ್ಯವಿದೆ. ಸದ್ಯ ಒಂದು ಲೀಟರ್ ಹಾಲಿಗೆ 36 ರೂ. ದರದಲ್ಲಿ ಖರೀದಿಸಲಾಗುತ್ತಿದೆ. ಒಂದು ಕೆ.ಜಿ.ಪೌಡರ್ ಮಾರಾಟದಲ್ಲಿ 180 ರೂ. ನಷ್ಟವಾಗುತ್ತಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಣ್ಣೆ ಮತ್ತು ಹಾಲಿನ ಪುಡಿ ದರ ಕಡಿಮೆ ಇದೆ. ಹೊರ ರಾಜ್ಯಗಳಲ್ಲಿ ಹಾಲು, ಪೌಡರ್ ಹಾಗೂ ಬೆಣ್ಣೆ ಮಾರಾಟದ ಮೂಲಕ ವಹಿವಾಟು ವೃದ್ಧಿಗೆ ಯೋಜಿಸಿದ್ದೇವೆ. ಇದರಿಂದಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಲಿನ ಪುಡಿ ಮತ್ತು ಬೆಣ್ಣೆ ದರ ಕಡಿಮೆ ಇದ್ದರೂ, ರೈತರಿಗೆ ಹೆಚ್ಚಿನ ದರ ನೀಡಿ ಹಾಲು ಖರೀದಿಸುವ ಒಕ್ಕೂಟದ ಆರ್ಥಿಕ ಶಕ್ತಿ ಹೆಚ್ಚಾಗಲಿದೆ ಎಂದರು.
ಒಕ್ಕೂಟದ ನಿರ್ದೇಶಕ ಜಿ.ಬಿ.ಶೇಖರ್ ಮಾತನಾಡಿ, ರೈತರಿಗೆ ಅನುಕೂಲಕ್ಕಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಹಾಲಿನ ಸೊಸೈಟಿಗಳನ್ನು ಆರಂಭಿಸಬೇಕಿದೆ ಎಂದು ತಿಳಿಸಿದರು.
ಜಾನುವಾರುಗಳಿಗೆ ವಿಮೆ ಮಾಡಿಸಿದರೆ ರಾಸುಗಳು ಮೃತಪಟ್ಟರೆ ಪರಿಹಾರ ದೊರಕುತ್ತದೆ. ರೈತರು ಗುಣಮಟ್ಟದ ಸಂಘಕ್ಕೆ ಕೊಡಬೇಕೆಂದು ಮನವಿ ಮಾಡಿದ ಅವರು, ಹಾಲಿನ ಖರೀದಿ ದರ ಹೆಚ್ಚಳಕ್ಕೆ ಒತ್ತಾಯಿಸಿದರು.
ನಿರ್ದೇಶಕರಾದ ರೇವಣಸಿದ್ದಪ್ಪ, ಸಂಜೀವಮೂರ್ತಿ, ರವಿಕುಮಾರ್, ಶೇಖರ್, ಶಿಮುಲ್ ಎಂಡಿ ಡಾ.ಮುರಳಿಧರ್, ಉಪ ವ್ಯವಸ್ಥಾಪಕ ಕುಮಾರಸ್ವಾಮಿ ಇದ್ದರು.