

ವಿಜಯವಾಣಿ ಸುದ್ದಿಜಾಲ ಗದಗ
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಶಾಸಕ ಕಳಕಪ್ಪ ಬಂಡಿ ಯಾವುದೇ ಜನಪರ ಕೆಲಸ ಮಾಡಿಲ್ಲ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಿದರೆ ಪಕ್ಷ ಸೋಲುವುದು ಖಚಿತ. ಈ ಸಲ ಯುವಕರಿಗೆ ಆದ್ಯತೆ ನೀಡಬೇಕೆಂದು ಬಿಜೆಪಿ ಕಾರ್ಯಕರ್ತರೆ ಬುಧವಾರ ಗಜೇಂದ್ರಗಡದಲ್ಲಿ ಪಕ್ಷದ ಮುಖಂಡರಿಗೆ ಮನವಿ ಸಲ್ಲಿಸಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ರಸ್ತೆ, ನೀರು, ಚರಂಡಿ, ಕೆರೆ ಅಭಿವೃದ್ಧಿ ಮತ್ತು ಉದ್ಯೋಗ ನೀಡುವ ಕುರಿತು ಕಾಳಜಿ ಇಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳನ್ನೂ ಮಾಡಿಲ್ಲ. ಹಾಲಿ ಶಾಸಕರು ಮುಂದಿನ ಚುನಾವಣೆಯಲ್ಲಿ ಸ್ಪರ್„ಸಿದರೆ ಸೋಲುವುದು ಖಚಿತ ಎಂದು ಕ್ಷೇತ್ರದ ಜನರು ಮಾತನಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಅಭಿವೃದ್ಧಿ ಮರೀಚಿಕೆ ಆಗಿದ್ದರಿಂದ ಗೆಲುವು ಸುಲಭವಲ್ಲ. ಹೀಗಾಗಿ ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ಯುವಕರಿಗೆ ಅವಕಾಶ ನೀಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ. ಬಿಜೆಪಿ ಕಾರ್ಯಕರ್ತರೆ ಬಿಜೆಪಿ ಶಾಸಕರ ವಿರುದ್ಧ ತಿರುಗಿಬಿದ್ದಿದ್ದು ಮುಖಂಡರಿಗೆ ತೀವ್ರ ಮುಜುಗರವನ್ನುಂಟು ಮಾಡಿತು.
ಟಿಕೆಟ್ ನೀಡುವುದು ನನ್ನ ಕೈಯಲ್ಲಿ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರೆ ಟಿಕೆಟ್ ಅಂತಿಮಗೊಳಿಸುತ್ತಾರೆ ಎಂದು ಮುಖಂಡರು ಸ್ಪಷ್ಟಪಡಿಸಿ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ವಿಧಾನಸಭೆ ಚುನಾವಣೆ ಕಾವು ನಿಧಾನವಾಗಿ ಏರತೊಡಗಿದೆ. ಹಾಲಿ ಶಾಸಕರ ಅಧಿಕಾರವಧಿ ಇನ್ನೂ ಏಳು ತಿಂಗಳು ಬಾಕಿ ಇದೆ. ಈಗಾಗಲೇ ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.
ಇದೀಗ ನಡೆದಿರುವ ಮನವಿ ಸಲ್ಲಿಸುವ ಪ್ರಹಸನ ಕೂಡಾ ಟಿಕೆಟ್ ಆಕಾಂಕ್ಷಿಗಳ ಪರವಾಗಿ ಕೆಲ ಕಾರ್ಯಕರ್ತರು ಮಾಡಿದ್ದಾರೆ. ಆದರೆ, ಬುಧವಾರ ನಡೆದ ಬೆಳವಣಿಗೆಯಿಂದ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವಂತೂ ಕ್ಷೇತ್ರದ ಜನರಿಗೆ ತಿಳಿದಂತಾಯಿತು.
ಬಿಜೆಪಿ ಕಾರ್ಯಕರ್ತರು ಶಾಸಕರ ವಿರುದ್ಧ ಮನವಿ ಸಲ್ಲಿಸಿರುವ ಸಂಗತಿ ಕಾಂಗ್ರೆಸ್ ಮುಖಂಡರ ಕೈಗೆ ಅಸ್ತ್ರ ನೀಡಿದಂತಾಗಿದೆ. ಮತದಾರರ ಮನಮುಟ್ಟಲು ಮನವಿ ಪತ್ರ ಪೂರಕವಾಗಬಹುದು. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಪತ್ರ ಹರಿದಾಡತೊಡಗಿದೆ. ಕ್ಷೇತ್ರದ ಜನರಿಂದ ಪರ ವಿರೋಧ ಶುರುವಾಗಿವೆ.ಇದೀಗ ಶುರುವಾಗಿರುವ ಬಿಜೆಪಿ ಬೇಗುದಿ ಎಲ್ಲಿಗೆ ತಲುಪಿಲಿದೆಯೇ ಗೊತ್ತಿಲ್ಲ. ಕಾರ್ಯಕರ್ತರಲ್ಲಿ ಕೊಂಚ ಗೊಂದಲ ಉಂಟು ಮಾಡಿರುವುದಂತೂ ಸತ್ಯ. ಶಾಸಕ ಕಳಕಪ್ಪ ಬಂಡಿ, ಸಿದ್ದಣ್ಣ ಬಂಡಿ, ರವಿ ದಂಡಿನ, ಅಂದಪ್ಪ ಸಂಕನೂರ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಟಿಕೆಟ್ ನೀಡುವುದು ಬಿಡುವುದು ವರಿಷ್ಠರ ಪರಮಾಧಿಕಾರ. ಮುಖಂಡರು ಕ್ಷೇತ್ರದ ವರದಿ ಕೇಳಿದರೆ ಜಿಲ್ಲಾ ಘಟಕದಿಂದ ವರದಿ ಸಲ್ಲಿಸಲಾಗುವುದು. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಅಪೇಕ್ಷಿತರು ಹುಟ್ಟಿಕೊಳ್ಳುವುದು ಸಹಜ. ಆದರೆ, ಸಾಮಥ್ರ್ಯ ಅರ್ಥ ಮಾಡಿಕೊಂಡು ಹೆಜ್ಜೆ ಇಡಬೇಕು. ಪಕ್ಷಕ್ಕೆ ನಮ್ಮ ಕೊಡುಗೆ ಏನು ಎಂದು ಅರಿತುಕೊಳ್ಳಬೇಕು. ಈ ಕುರಿತು ಮುಖಂಡರೆ ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮುತ್ತಣ್ಣ ಲಿಂಗನಗೌಡ, ಜಿಲ್ಲಾಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ ಗದಗ