ಹಾಲಳ್ಳಿ-ಖಾಜಿಬೆಳ್ಳಗಿ ರಸ್ತೆಯಲ್ಲಿ ಧೂಳಿನ ಆಗರ

Published on

ಅರಟಾಳ: ತಾಲೂಕಿನ ಹಾಲಳ್ಳಿ ಗ್ರಾಮದಿಂದ ಖಾಜಿಬೆಳ್ಳಗಿ ಗ್ರಾಮದ ವರೆಗೆ ಸುಮಾರು 4 ಕಿ.ಮೀ. ರಸ್ತೆ ಹದಗೆಟ್ಟಿದ್ದು, ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ರಸ್ತೆ ತುಂಬ ಗುಂಡಿ ಸೃಷ್ಟಿಯಾಗಿವೆ. ಅಧಿಕಾರಿಗಳಿಗೆ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಮಳೆಗಾಲದಲ್ಲಿ ವಾಹನ ಬಿಟ್ಟು ನಡೆದುಕೊಂಡು ಹೋಗುವ ದುಸ್ಥಿತಿ ಎದುರಾಗಿದೆ.

ಜಮಖಂಡಿ ತಾಲೂಕಿನ ಕಾಜೀಬೇಳಗಿ ಗ್ರಾಮದ ವಿದ್ಯಾರ್ಥಿಗಳು ಹಾಲಳ್ಳಿ ಗ್ರಾಮದ ಪ್ರೌಢಶಾಲೆಗೆ ಇದೇ ರಸ್ತೆ ಬಳಸಿ ಬರುತ್ತಾರೆ. ಬಸ್ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಪ್ರತಿದಿನ ಮಕ್ಕಳು ಸೈಕಲ್ ಮೇಲೆಯೇ ಬರಬೇಕು. ಇಂತಹ ಹದಗೆಟ್ಟ ರಸ್ತೆಯಲ್ಲಿ ಪ್ರತಿದಿನ ಸೈಕಲ್ ಪಂಚರ್ ಆಗುತ್ತಿವೆ. ಯಾವುದಾದರೂ ವಾಹನ ಹಾದು ಹೋದರೆ ವಿಪರೀತ ಧೂಳು ಆವರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಶಾಲೆಗೆ ಹೋಗುವುದೇ ದುಸ್ತರವಾಗಿದೆ. ಈ ರಸ್ತೆಯ ಮೂಲಕ ತೆಲಸಂಗ, ಅಥಣಿ, ಮಿರಜ್, ಜತ್ತ ನಗರಗಳಿಗೆ ಗೋಠೆ, ಖಾಜಿಬೆಳ್ಳಗಿ, ಕನ್ನೊಳ್ಳಿ, ಗದ್ಯಾಳ ಸೇರಿ ವಿವಿಧ ಗ್ರಾಮಗಳಿಂದ ಜನರು ಸಂಚಾರ ಮಾಡುತ್ತಾರೆ. ರೈತರು ಬೆಳೆದ ಕಬ್ಬು ಇನ್ನಿತರ ಉತ್ಪನ್ನ ಮಾರಾಟ ಮಾಡಲು ಹೋಗಬೇಕಾದರೆ ಹಾಳಾದ ರಸ್ತೆಯಿಂದಾಗಿ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಇದೆ. ರೈತರು ಎತ್ತಿನ ಗಾಡಿಯಲ್ಲಿ ತಮ್ಮ ಜಮೀನುಗಳಿಗೆ ಸಂಚರಿಸುವುದು ಸಾಹಸವೇ ಆಗಿದೆ. ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಗರ್ಭಿಣಿಯರು, ತುರ್ತು ಚಿಕಿತ್ಸೆ ಬೇಕಾಗಿರುವ ರೋಗಿಗಳು ಸಂಚರಿಸಬೇಕಾದರೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಪಘಾತಗಳು ಸರ್ವೇ ಸಾಮಾನ್ಯವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮೂರು ಬಾರಿ ಪ್ರಸ್ತಾವನೆ ಕಳಿಸಿದ್ದೇವೆ. ಅನುದಾನ ಬಂದಿಲ್ಲ. ಅನುದಾನ ಬಿಡುಗಡೆಯಾದರೆ ರಸ್ತೆ ಕಾಮಗಾರಿ ಆರಂಭಿಸಲಾಗುವುದು.| ಜಿ.ಎ.ಹಿರೇಮಠ ಎಇಇ ಜಿಪಂ ಅಥಣಿ

| ಶ್ರೀಶೈಲ ಮಾಳಿ ಅರಟಾಳ

ಹಾಲಳ್ಳಿ- ಕಾಜೀಬೆಳಗಿ ರಸ್ತೆ ತಗ್ಗು-ಗುಂಡಿ ಸೃಷ್ಟಿಯಾಗಿ ಸಂಪೂರ್ಣ ಹಾಳಾಗಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net