ಹಾಲನ್ನು ಚೆಲ್ಲಿ ರೈತರ ಪ್ರತಿಭಟನೆ

02M.D.R.1
Published on

ಮದ್ದೂರು: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಹಾಲು ಉತ್ಪಾದಕರಿಂದ ಪಡೆಯುವ ಪ್ರತಿ ಲೀಟರ್ ಹಾಲಿಗೆ 1.50 ರೂ. ಕಡಿತ ಮಾಡಿರುವುದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ತಾಲೂಕಿನ ಕೊಪ್ಪದಲ್ಲಿ ಮನ್‌ಮುಲ್ ಅಧ್ಯಕ್ಷ ಬೋರೇಗೌಡ ಅವರ ಪ್ರತಿಕೃತಿ ದಹಿಸಿ, ಹಾಲನ್ನು ನೆಲಕ್ಕೆ ಚೆಲ್ಲಿ, ರೈತರು ಪ್ರತಿಭಟನೆ ನಡೆಸಿದರು.


ರಾಜ್ಯ ಸರ್ಕಾರ ಹಾಗೂ ಮನ್‌ಮಲ್ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಶನಿವಾರ ಆಕ್ರೋಶ ವ್ಯಕ್ತಪಡಿಸಿದರು. ಜಯ ಕರ್ನಾಟಕ ಸಂಘಟನೆಯ ಕೊಪ್ಪ ಹೋಬಳಿ ಘಟಕದ ಅಧ್ಯಕ್ಷ ಎಂ. ಮೂಗೂರೇಗೌಡ ಮಾತನಾಡಿ, ಮಂಡ್ಯ ಜಿಲ್ಲೆ ಬರದ ಬೆಂಗಾಡಿಗೆ ಸಿಲುಕಿ ನಲುಗುತ್ತಿದೆ. ರೈತರು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 1.50 ರೂ. ಕಡಿತ ಮಾಡುವ ಮೂಲಕ ರೈತರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಮೇವಿನ ದರವನ್ನು ಹೆಚ್ಚು ಮಾಡಿ, ಹಾಲಿನ ದರವನ್ನು ಕಡಿಮೆ ಮಾಡುತ್ತಿರುವುದರಿಂದ ರೈತರು ರಾಸುಗಳನ್ನು ಸಾಕುವುದು ಸಾಹಸದ ಕೆಲಸವಾಗಿದೆ. ಹೈನುಗಾರಿಕೆಯಿಂದ ನಿರಂತರವಾಗಿ ನಷ್ಟ ಸಂಭವಿಸುತ್ತಿದ್ದು, ಹೈನುಗಾರಿಕೆ ಮಾಡುತ್ತಿರುವ ರೈತರು ಹೈರಾಣಾಗಿದ್ದಾರೆ. ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಲೀಟರ್ ಹಾಲಿಗೆ ಕನಿಷ್ಠ 50 ರೂ. ನೀಡಬೇಕು ಎಂದು ಒತ್ತಾಯಿಸಿದರು.


ನಮ್ಮ ದೇಶದಲ್ಲಿ ಕುಡಿಯುವ ನೀರಿಗೂ ಹಾಗೂ ಹಾಲಿಗೂ ಒಂದೇ ಬೆಲೆ ಇದೆ. ಇಂತಹ ತಾರತಮ್ಯದಿಂದ ರೈತರು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಮನ್‌ಮುಲ್ ಆಡಳಿತ ಮಂಡಳಿ ಈ ಕೂಡಲೇ ಲೀಟರ್ ಹಾಲಿಗೆ 1.50 ರೂ. ಕಡಿತ ಮಾಡಿರುವ ಆದೇಶವನ್ನು ಹಿಂಪಡೆದು ರೈತರಿಗೆ ಪೂರ್ಣ ಪ್ರಮಾಣದ ಹಣ ನೀಡಬೇಕು ಎಂದರು.


ತಕ್ಷಣ ಕಡಿಮೆ ಮಾಡಿರುವ ಆದೇಶ ಹಿಂಪಡೆಯದಿದ್ದರೆ ಹಳ್ಳಿ ಹಳ್ಳಿಗಳಿಗೂ ಹೋರಾಟವನ್ನು ವಿಸ್ತರಿಸಿ, ಮುಂದಿನ ದಿನಗಳಲ್ಲಿ ಮನ್‌ಮುಲ್ ಮುಂದೆ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.


ಜಯ ಕರ್ನಾಟಕ ಸಂಘಟನೆಯ ಕೊಪ್ಪ ಹೋಬಳಿ ಅಧ್ಯಕ್ಷ ಎಂ. ಮೂಗೂರೇಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಮದ್ ಇಲಿಯಾಜ್, ರೈತ ಸಂಘದ ಜಿಲ್ಲಾ ಸಂಚಾಲಕ ಎಚ್.ಬಿ. ರವಿ, ಕೊಪ್ಪ ಹೋಬಳಿ ಅಧ್ಯಕ್ಷ ಎನ್.ಎಚ್. ಶಿವನಂಜೇಗೌಡ, ಕಾರ್ಯದರ್ಶಿ ಹುರುಗಲವಾಡಿ ಉಮೇಶ್, ಮುಖಂಡರಾದ ಗೊಲ್ಲರದೊಡ್ಡಿ ಅಶೋಕ್, ಬೆಟ್ಟಸ್ವಾಮಿ, ಎಂ. ಕೃಷ್ಣೇಗೌಡ, ಜಗದೀಶ್, ರಘುನಂದನ್, ದೊಡ್ಡಮರಿಯಣ್ಣ, ರಮೇಶ್, ಗೌರಮ್ಮ, ರತ್ನಮ್ಮ, ಗುಂಡಮ್ಮ, ಸೌಭಾಗ್ಯಮ್ಮ, ನೀಲಮ್ಮ, ರೇಣುಕಾ, ಡೇರಿ ಪುಟ್ಟಸ್ವಾಮಿ, ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net