

ಹಾಸನ: ಹೃದಯ ವೈಫಲ್ಯ ಹಾಗೂ ಹೃದಯ ಬಡಿತದ ಏರುಪೇರಿನಿಂದ ಬಳಲುತ್ತಿದ್ದ ಹಾಸನದ 70 ವರ್ಷದ ವ್ಯಕ್ತಿಗೆ ನೂತನ ಚಿಕಿತ್ಸಾ ವಿಧಾನವಾದ ಕಾರ್ಡಿಯಾಕ್ ರಿಸಿಂಕ್ರೂನೈಸೇಶನ್ ಥೆರಪಿ ಮತ್ತು ಡಿಫಿಬ್ರಿಲೇಟರ್ ಶಸ್ತ್ರ ಚಿಕಿತ್ಸೆಯನ್ನು ಹೃದ್ರೋಗ ತಜ್ಞರಾದ ಡಾ.ಮದಕರಿ ನಾಯಕ ಹಾಗೂ ಅವರ ತಂಡ ಇಲ್ಲಿನ ಪ್ರಮುಖ ಆಸ್ಪತ್ರೆಯಾದ ಸ್ಪರ್ಶ್ ಆಸ್ಪತ್ರೆಯಲ್ಲಿ ಪೂರೈಸಿದೆ. ಈ ಚಿಕಿತ್ಸೆಯು ರೋಗಿಗೆ ಪುನರ್ಜೀವ ನೀಡಿದಂತಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ಮೂಲಕ ತಿಳಿಸಿದೆ.
ಕೆಲವು ವರ್ಷಗಳಿಂದ 70 ವರ್ಷದ ವ್ಯಕ್ತಿ ಡೈಲೇಟೆಡ್ ಕಾರ್ಡಿಯೋ ಮೈಯೋಪಥಿ ಹಾಗೂ ಹೃದಯ ದೌರ್ಬಲ್ಯದಿಂದ ಬಳಲಿದ್ದರು. ಇತ್ತೀಚಿನ ದಿನಗಳಲ್ಲಿ ಹಾರ್ಟ್ ಫೈಲ್ಯೂರ್ ಹಾಗೂ ಹೃದಯದ ಎದೆ ಬಡಿತದ ಏರುಪೇರಿನಿಂದ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ರೀತಿಯ ಹೃದಯ ಕಾಯಿಲೆಗೆ ನೂತನ ಚಿಕಿತ್ಸಾ ವಿಧಾನವಾದ ಕಾರ್ಡಿಯಾಕ್ ರಿಸಿಂಕ್ರೂನೈಸೇಶನ್ ಥೆರಪಿ ಮತ್ತು ಡಿಫಿಬ್ರಿಲೇಟರ್ ಶಸ್ತ್ರ ಚಿಕಿತ್ಸೆ ರೋಗಿಯಲ್ಲಿ ಹಾರ್ಟ್ ಫೇಲ್ಯೂರ್ ಹಾಗೂ ಸಾವಿನ ದವಡೆಯಿಂದ ಪಾರಾಗಲು ಸಹಾಯಕಾರಿದೆ.
ಈ ನೂತನ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಬ್ಯಾಟರಿ (ಪಲ್ಸ್ ಜನರೇಟರ್) ಹಾಗೂ ವಿದ್ಯುತ್ ತಂತಿ (ಪೇಸ್ ಮೇಕರ್ ಲೀಡ್ಸ್)ಗಳನ್ನು ಅಪಧಮನಿ ಮೂಲಕ ಹೃದಯದ ಬಲಗಡೆಯ ಕೋಣೆಗೆ ಅಳವಡಿಸಲಾಗುತ್ತದೆ. ಇದರಿಂದ ಹೃದಯದ ಬಡಿತವನ್ನು ಕೃತಕವಾಗಿ ಹಾಗೂ ನಿಖರವಾಗಿ ನಿಯಂತ್ರಿಸುವಲ್ಲಿ ಸಹಾಯವಾಗುತ್ತದೆ. ಹೃದಯದ ಎದೆ ಬಡಿತದ ಏರುಪೇರು ಆದ ಸಮಯದಲ್ಲಿ ಅಳವಡಿಸಲಾದ ಪೇಸ್ ಮೇಕರ್ ಸ್ವತಃ ಪತ್ತೆ ಹಚ್ಚಿ ಹೃದಯವನ್ನು ಮರುಸ್ಥಿತಿಗೆ ಕೊಂಡೊಯ್ಯುತ್ತದೆ. ಇದರಿಂದ ರೋಗಿಯು ಕಾರ್ಡಿಯಾಕ್ ಅರೆಸ್ಟ್ ಹಾಗೂ ಸಡನ್ ಡೆತ್‌ನಿಂದ ಪಾರಾಗಲು ಸಹಾಯವಾಗಿರುತ್ತದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಪ್ರಕಟನೆ ಮೂಲಕ ತಿಳಿಸಿದೆ.