

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಹಾರೋಬೆಳವಡಿ ಗ್ರಾಮದಿಂದ ನವಲಗುಂದ ತಾಲೂಕು ಆಯಟ್ಟಿ ಗ್ರಾಮ ತಲುಪುವ 5 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದ್ದು, ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹಾರೋಬೆಳವಡಿಯಿಂದ ಆಯಟ್ಟಿ ಗ್ರಾಮದವರೆಗಿನ ರಸ್ತೆಗೆ ಹಾಕಲಾಗಿದ್ದ ಡಾಂಬರ್ ಮತ್ತು ಖಡಿ ಮಳೆಯಿಂದ ಕಿತ್ತು ಹೋಗಿದೆ. ರಸ್ತೆಗುಂಟ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ವಾಹನಗಳ ಸಂಚಾರಕ್ಕೆ ಅದರಲ್ಲೂ ಮುಖ್ಯವಾಗಿ ದ್ವಿಚಕ್ರವಾಹನಗಳ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿದೆ. ರೈತರು ಜಮೀನಿಗೆ ಚಕ್ಕಡಿ, ಟ್ರಾೃಕ್ಟರ್‌ನಲ್ಲಿ ತೆರಳುವುದು ಕಷ್ಟಕರವಾಗಿದೆ.
ದೊಡ್ಡ ವಾಹನಗಳಂತೂ ಈ ರಸ್ತೆಯಲ್ಲಿ ಸಂಚರಿಸುವುದು ಅಸಾಧ್ಯ. ಅಧಿಕ ಭಾರವನ್ನು ಹೊತ್ತ ಲಾರಿಗಳ ಸಂಚಾರಕ್ಕೂ ರಸ್ತೆ ಮುಕ್ತವಾಗಿಲ್ಲ. ಹೀಗಾಗಿ ಕೂಡಲೇ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗುವಂತೆ ಸುಧಾರಿಸಲು ಸಂಬಂಧಿಸಿದ ಅಧಿಕಾರಿಗಳು ಗಮನಿಸಬೇಕು ಎಂದು ಹಾರೋಬೆಳವಡಿ ಮತ್ತು ಆಯಟ್ಟಿ ಗ್ರಾಮಗಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಾರೋಬೆಳವಡಿ-ಆಯಟ್ಟಿ ರಸ್ತೆ ಸುಧಾರಣೆಗೆ ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಶಾಸಕರಾದ ಎನ್.ಎಚ್. ಕೋನರಡ್ಡಿ ಹಾಗೂ ವಿನಯ ಕುಲಕರ್ಣಿ ಜಂಟಿಯಾಗಿ ಅಧಿಕಾರಿಗಳಿಗೆ ಸೂಚಿಸಿ, ರಸ್ತೆಯು ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡುವಂತೆ ಕಿತ್ತೂರು ರಾಣಿ ಚನ್ನಮ್ಮ ಸೌಹಾರ್ದ ಸಹಕಾರಿಯ ಇನಾಂಹೊಂಗಲ ಶಾಖೆ ಆಡಳಿತ ಮಂಡಳಿ ಉಪಾಧ್ಯಕ್ಷ ರಾಮಣ್ಣ ಜಕ್ಕಣ್ಣವರ ಒತ್ತಾಯಿಸಿದ್ದಾರೆ.