

ಧಾರವಾಡ: ಭಾನುವಾರ ತಡರಾತ್ರಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಹಾರೋಬೆಳವಡಿ ಬಳಿಯ ಸೇತುವೆ ಮತ್ತೆ ಜಲಾವೃತಗೊಂಡಿದ್ದು, ರಸ್ತೆ ಸಂಚಾರ ಬಂದ್ ಆಗಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ ಸುರಿದ ಭಾರಿ ಮಳೆಗೆ ಹಾರೋಬೆಳವಡಿ ಬಳಿಯ ಬೃಹತ್ ಸೇತುವೆ ಕೊಚ್ಚಿಕೊಂಡು ಹೋಗಿದೆ. ಪಕ್ಕದಲ್ಲಿ ತಾತ್ಕಾಲಿಕ ರಸ್ತೆ ನಿರ್ವಿುಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಇತ್ತೀಚೆಗೆ ಬೆಳಗಾವಿ ಸೇರಿದಂತೆ ಕಿತ್ತೂರು ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿದು ಪಕ್ಕದ ರಸ್ತೆ ಜಲಾವೃತವಾಗಿತ್ತು. ಭಾನುವಾರದ ಮಳೆಗೆ ಸೇತುವೆಯ ಅಡಿಯಿಂದ ನೀರು ಪ್ರವಾಹದಂತೆ ಹರಿಯುತ್ತಿದ್ದು, ಪಕ್ಕದ ರಸ್ತೆ ಜಲಾವೃತವಾಗಿ ಸಂಚಾರ ಬಂದ್ ಆಗಿದೆ. ಸೋಮವಾರ ರಾತ್ರಿವರೆಗೂ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಸವದತ್ತಿಯತ್ತ ತೆರಳುವ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಧಾರವಾಡದಿಂದ ಸವದತ್ತಿ ಮಾರ್ಗವಾಗಿ ವಿವಿಧ ಜಿಲ್ಲೆಗಳನ್ನು ಸಂರ್ಪಸುವ ರಾಜ್ಯ ಹೆದ್ದಾರಿ ಇದಾಗಿದೆ. ಸಣ್ಣ ಮಳೆಗೆ ಜಲಾವೃತಗೊಳ್ಳುವ ರಾಜ್ಯ ಹೆದ್ದಾರಿ ಸೇತುವೆ, ಧಾರವಾಡ- ಸವದತ್ತಿ ಸಂಪರ್ಕವನ್ನು ಕಡಿತಗೊಳಿಸುತ್ತಿದೆ. ಬೆಳಗಾವಿ ಲೋಕೋಪಯೋಗಿ ಇಲಾಖೆಯಿಂದ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಂಡು ತಿಂಗಳುಗಳಾಗಿದ್ದರೂ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ.
2019ರ ಆಗಸ್ಟ್ನಲ್ಲಿ ಕಿತ್ತು ಹೋಗಿರುವ ಬೃಹತ್ ಸೇತುವೆಯ ಕಾಮಗಾರಿ ಮತ್ತೊಂದು ಮಳೆಗಾಲ ಮುಗಿಯುತ್ತ ಬಂದರೂ ವೇಗವಾಗಿ ನಡೆಯುತ್ತಿಲ್ಲ. ಬೆಳಗಾವಿ, ಕಿತ್ತೂರು ಪ್ರದೇಶದಿಂದ ಭಾರಿ ಪ್ರಮಾಣದಲ್ಲಿ ಬರುವ ನೀರು ಈ ಸೇತುವೆ ಮೂಲಕ ಹಾದು ಹೋಗುತ್ತದೆ. ಸಣ್ಣ ಮಳೆಯಾದರೂ ಜಲಾವೃತಗೊಂಡು ಪಕ್ಕದ ತಾತ್ಕಾಲಿಕ ರಸ್ತೆ ಸಂಪರ್ಕ ಕಡಿದು ಹೋಗುತ್ತಿದೆ. ಇದರಿಂದ ಸವದತ್ತಿ ಕಡೆ ಹೋಗುವ ಜನರು ಅನಿವಾರ್ಯವಾಗಿ ಸುತ್ತುವರಿದು ಯಾದವಾಡ- ಬೆಟಗೇರಿ ಮಾರ್ಗವನ್ನು ಅವಲಂಬಿಸಬೇಕಾಗಿದೆ.| ಈಶ್ವರ ಶಿವಳ್ಳಿ ಹಾರೋಬೆಳವಡಿ ನಿವಾಸಿ